ಉಡುಪಿ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ದೇಶದಾದ್ಯಂತ ವೈಶಿಷ್ಟ್ಯಮಯ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಆಗಸ್ಟ್ 15ರಂದು ಬೆಳಿಗ್ಗೆ ಗಂಟೆ 8.30ಕ್ಕೆ ರಾಷ್ಟ್ರ ಧ್ವಜದೊಂದಿಗೆ 75 ವಾಹನಗಳ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಉಡುಪಿ ಬನ್ನಂಜೆ ಶ್ರೀ ನಾರಾಯಣ ಗುರು ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ವಾಹನ ಜಾಥಾಕ್ಕೆ ಶಂಖ ನಾದದೊಂದಿಗೆ ಚಾಲನೆ ನೀಡಲಿದ್ದಾರೆ. ವಾಹನ ಜಾಥಾ ಬನ್ನಂಜೆಯಿಂದ ಹೊರಟು ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಕಡಿಯಾಳಿ ಬಿಜೆಪಿ ಜಿಲ್ಲಾ ಕಚೇರಿಯ ಬಳಿ ಸಮಾಪನಗೊಳ್ಳಲಿದೆ.
ಬಳಿಕ ಬೆಳಿಗ್ಗೆ 9 ಗಂಟೆಗೆ ಕಡಿಯಾಳಿ ಬಿಜೆಪಿ ಜಿಲ್ಲಾ ಕಚೇರಿಯ ವಠಾರದಲ್ಲಿ ಜಿಲ್ಲಾ ಬಿಜೆಪಿಯ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಸಹಯೋಗದೊಂದಿಗೆ 75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ಹೂಗಳಿಂದ ಭಾರತದ ಭೂಪಟ ರಚಿಸಿ, ಏಕ ಕಾಲದಲ್ಲಿ 75 ಹಣತೆಗಳಲ್ಲಿ ದೀಪ ಪ್ರಜ್ವಲನ ಮಾಡಲಾಗುವುದು.
ಈ ಎಲ್ಲಾ ಸಂಭ್ರಮದ ಕ್ಷಣಗಳಲ್ಲಿ ಮಹಿಳಾ ಮೋರ್ಚಾದ ಜಿಲ್ಲಾ ಮತ್ತು ಮಂಡಲಗಳ ಪದಾಧಿಕಾರಿಗಳು, ಸಮಿತಿ ಸದಸ್ಯರು, ಕಾರ್ಯಕಾರಿಣಿ ಸದಸ್ಯರು ಕೇಸರಿ ಬಿಳಿ ಹಸಿರು ಬಣ್ಣದ ಉಡುಗೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಭಾರತ ಮಾತೆಗೆ ಗೌರವ ಅರ್ಪಿಸುವ, ದೇಶದ ಸ್ವಾತಂತ್ರ್ಯವನ್ನು ಸಂಭ್ರಮಿಸುವ ಈ ಅಭೂತಪೂರ್ವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಗೊಳಿಸಬೇಕೆಂದು ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿತಾ ಬಾಲಕೃಷ್ಣ ಶೆಟ್ಟಿ ಮತ್ತು ಪ್ರಮೀಳಾ ಹರೀಶ್ ತಿಳಿಸಿದ್ದಾರೆ.