ಉಡುಪಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಗುರುವಾರ ಕಡೆಕಾರು ಗ್ರಾಮದಲ್ಲಿ ರೈತ ಮಹಿಳೆಯರೊಂದಿಗೆ ಭತ್ತದ ಗದ್ದೆಯಲ್ಲಿ ಕಳೆ ಕಿತ್ತರು.
ಕೇದಾರೋತ್ಥಾನ ಟ್ರಸ್ಟ್‌ನಿಂದ ಉಡುಪಿ ತಾಲ್ಲೂಕಿನಾದ್ಯಂತ ಹಡಿಲುಭೂಮಿ ಕೃಷಿ ಆಂದೋಲನ ನಡೆಸಲಾಗುತ್ತಿದ್ದು, 1,500 ಎಕರೆಗೂ ಹೆಚ್ಚು ಹಡಿಲುಭೂಮಿಯಲ್ಲಿ ಭತ್ತದ ನಾಟಿ ಮಾಡಲಾಗಿದೆ.
ಕಡೆಕಾರ್ ಗ್ರಾಪಂ ವ್ಯಾಪ್ತಿಯಲ್ಲಿ 140 ಎಕರೆ ಹಡಿಲು ಭೂಮಿಯಲ್ಲಿ ನಾಟಿ ಮಾಡಲಾಗಿದ್ದು, ಇದರ ಪೈರಿನ ನಡುವೆ ಬೆಳೆದ ಕಳೆ ತೆಗೆಯುವ ಕಾರ್ಯದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಿದರು. ಸಚಿವೆಗೆ ಶಾಸಕ ರಘುಪತಿ ಭಟ್ ಸಾಥ್ ನೀಡಿದರು.
ಕಳೆ ಕೀಳುವ ಕಾರ್ಯದಲ್ಲಿ ಹಲವು ಕಾಲೇಜಿನ ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಕೃಷ್ಣಮಠಕ್ಕೆ ಭೇಟಿ: ಕೇಂದ್ರ ಸಚಿವೆಯಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿರುವ ಸಚಿವೆ ಶೋಭಾ ಕರಂದ್ಲಾಜೆ ಅಚರು, ಬೆಳಿಗ್ಗೆ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಅವರಿಂದ ಫಲ ಮಂತ್ರಾಕ್ಷತೆ ಪಡೆದರು.