ಉಡುಪಿಯಲ್ಲಿ ಇಂದು ಕೂಡ 41 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಮುಂದುವರಿದಿದ್ದು, ಇಂದು ಕೂಡ 41 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1608ಕ್ಕೆ ಏರಿಕೆಯಾಗಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿದ್ದಾರೆ.
ಉಡುಪಿ ತಾಲ್ಲೂಕಿನ 26, ಕುಂದಾಪುರದ 11 ಮತ್ತು ಕಾರ್ಕಳದ 4 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 41 ಮಂದಿ ಸೋಂಕಿತರ ಪೈಕಿ 26 ಪುರುಷರು, 11 ಮಹಿಳೆಯರು ಮತ್ತು ನಾಲ್ಕು ಮಕ್ಕಳು ಇದ್ದಾರೆ. ಹಾಗೆಯೇ ಇಬ್ಬರು ಮುಂಬೈ, ಓರ್ವ ಸೌದಿ ಮತ್ತು ಆರು ಮಂದಿ ಹೊರಜಿಲ್ಲೆಗಳಿಂದ  ಬಂದವರಿಗೆ ಸೋಂಕು ದೃಢಪಟ್ಟಿದ್ದು, ಉಳಿದಂತೆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 32 ಮಂದಿಗೆ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ.
ಇಂದು 28 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಜಿಲ್ಲೆಯ ವಿವಿಧ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 22 ಮಂದಿ ಐಸೋಲೇಷನ್ ವಾರ್ಡ್ ಗೆ ದಾಖಲಾಗಿದ್ದು, ಈವರೆಗೆ 140 ಮಂದಿ ಐಸೋಲೇಷನ್ ವಾರ್ಡ್ ನ ನಿಗಾದಲ್ಲಿದ್ದಾರೆ. ಇನ್ನು 1856 ಮಂದಿಯ ಕೊರೊನಾ ವರದಿ ಬರಲು ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ.