ಉಡುಪಿಯಲ್ಲಿ ಕೊರೊನಾ ಸೋಂಕಿಗೆ ಎರಡನೇ ಬಲಿ: ಮುಂಬೈನಿಂದ ಬಂದಿಳಿದ ನಾಲ್ಕು ತಾಸಿನಲ್ಲೇ ತೆಕ್ಕಟ್ಟೆ ನಿವಾಸಿ ಸಾವು

ಉಡುಪಿ: ಮುಂಬೈನಿಂದ ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆಗೆ ಗುರುವಾರ ಬಂದಿಳಿದ ನಾಲ್ಕು ತಾಸುಗಳಲ್ಲೇ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಮುಂಬೈನಿಂದ ನಾಲ್ಕು ಮಂದಿ ಗುರುವಾರ ತೆಕ್ಕಟ್ಟೆ ಬಂದಿದ್ದರು. ಅವರಿಗೆ ಜಿಲ್ಲಾ ಬಿಆರ್ ಸಿ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನ್ ಮಾಡಿದ್ದು ಅವರಿಗೆ ತಾಪಮಾನ ಇರದಿದ್ದರಿಂದ ಅಧಿಕಾರಿಗಳು ಅವರನ್ನು ಹೋಮ್ ಕ್ವಾರಂಟೈನ್ ಗೆ ಕಳುಹಿಸಿದ್ದರು. ಅದರಲ್ಲಿ ಒಬ್ಬರು ಏಕಾಏಕಿಯಾಗಿ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಮರಣದ ಬಳಿಕ ಅವರ ಗಂಟಿನ ದ್ರವ ಲ್ಯಾಬ್ ಕಳುಹಿಸಿದ್ದು, ಅದರಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಸೋಂಕಿನ ಲಕ್ಷಣ ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಪರೀಕ್ಷೆಗೆ ಒಳಗಾಗಬೇಕು. ಆಗ ಮಾತ್ರ ವ್ಯಕ್ತಿಯ ಪ್ರಾಣ ಉಳಿಸಲು ಸಾಧ್ಯ. ಹಾಗಾಗಿ ಯಾರು ಸೋಂಕನ್ನು ನಿರ್ಲಕ್ಷ್ಯ ಮಾಡಿ‌ ಮನೆಯಲ್ಲಿ ಕುಳಿತುಕೊಳ್ಳಬಾರದು. ಆದಷ್ಟು ಬೇಗ ಪರೀಕ್ಷೆಗೆ ಒಳಪಟ್ಟು ಪ್ರಾಣ ಉಳಿಸಿಕೊಳ್ಳಬೇಕು ಎಂದು ಡಿಸಿ ತಿಳಿಸಿದ್ದಾರೆ.