ಉಡುಪಿ: ಬಸ್ ನಲ್ಲಿ ಪರ್ಸ್ ಕಳವು ಮಾಡುತ್ತಿದ್ದ ಕತರ್ನಾಕ್ ಕಳ್ಳಿಯರ ಬಂಧನ

ಉಡುಪಿ: ಬಸ್ ವೊಂದರಲ್ಲಿ ಪ್ರಯಾಣಿಕರೊಬ್ಬರ ನಗದು ಸಹಿತ ಪರ್ಸ್ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇವರಿಂದ ₹ 32,400 ನಗದು, ಎರಡು ಮೊಬೈಲ್, ಎರಡು ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಬಳ್ಳಾರಿಯ ಸಬಿತಾ, ಲತಾ, ಕವಿತಾ ಎಂದು ಗುರುತಿಸಲಾಗಿದೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕೇವಲ 12 ಗಂಟೆಯೊಳಗೆ ಈ ಮೂವರು ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಪ್ರಕರಣ?:
ಬೆಂಗಳೂರು ಉತ್ತರಹಳ್ಳಿ ಅರ್ಚನಾ ರಾವ್ (39) ಎಂಬವರು ಅ.20 ರಂದು ಸಂಜೆ 6ಗಂಟೆಗೆ ಬಸ್ ನಲ್ಲಿ ಉಡುಪಿ ಸಿಟಿಬಸ್ ನಿಲ್ದಾಣದಿಂದ ಕುಂಜಿಬೆಟ್ಟುವಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮೂವರು ಮಹಿಳೆಯರು ಕಡಿಯಾಳಿಯಿಂದ ಬಸ್ ಹತ್ತಿದ್ದು, ಅವರ ಕೈಯಲ್ಲಿದ್ದ ಮಗುವನ್ನು ಅರ್ಚನಾ ರಾವ್ ತೊಡೆಯ ಮೇಲೆ ಕೂರಿಸಿದರು. ಬಳಿಕ ಅರ್ಚನಾ ರಾವ್ ಬಳಿಯೇ ಮೂವರು ನಿಂತಿದ್ದು, ಅವರಿಗೆ ತಿಳಿಯದ ರೀತಿಯಲ್ಲಿ ಅವರ ಹೆಗಲ ಮೇಲೆ ಇದ್ದ ಬ್ಯಾಗಿನ ಜೀಪ್ ತೆರೆದು ಅದರ ಒಳಗಡೆ ಇದ್ದ ಪರ್ಸನ್ನು ಕಳವು ಮಾಡಿದ್ದರು.

ಬಳಿಕ ಆ ಮಹಿಳೆಯರು ಬ್ಯಾಗಿನಲ್ಲಿದ್ದ ಚೀಟಿಯಲ್ಲಿ ಬರೆದಿಟ್ಟಿದ್ದ ಎಟಿಎಂ ಪಿನ್ ಬಳಸಿ 25,000ರೂ. ಹಣವನ್ನು ಡ್ರಾ ಮಾಡಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಧಾರವಾಡಕ್ಕೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ್ದ ಆರೋಪಿಗಳನ್ನು ಉಡುಪಿ ನಗರದಲ್ಲಿ ಬಂಧಿಸಿದ್ದಾರೆ.