ಉಡುಪಿ: ಡಿ.11ಕ್ಕೆ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ ನೂತನ ಶಾಖಾಮಠ ಉದ್ಘಾಟನೆ

ಉಡುಪಿ: ಸಾರಸ್ವತ ಸಮಾಜದ ಆದ್ಯಪೀಠ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ 17ನೇ ನೂತನ ಶಾಖಾ ಮಠ ಉಡುಪಿಯಲ್ಲಿ ಡಿಸೆಂಬರ್ 11ರಂದು ಲೋಕಾರ್ಪಣೆಗೊಳ್ಳಲಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಉಡುಪಿ ಕೈವಲ್ಯ ಶಾಖಾ ಮಠದ ಅಧ್ಯಕ್ಷ ಸಂತೋಷ್ ವಾಗ್ಳೆ ಅವರು, ಉಡುಪಿ ಆತ್ರಾಡಿ ಪರೀಕ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ನೂತನ ಭವ್ಯ ಶಾಖಾ ಮಠವನ್ನು ಶ್ರೀ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀ ಮಹಾರಾಜ್ ಅಂದು ಸಂಜೆ 3 ಗಂಟೆಗೆ ಉದ್ಘಾಟಿಸುವ ಮೂಲಕ ಸಾರಸ್ವತ ಸಮಾಜಕ್ಕೆ ಅರ್ಪಣೆ ಮಾಡಲಿದ್ದಾರೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಮೊದಲಾದ ಗಣ್ಯರು ಭಾಗವಹಿಸುವರು.

ಡಿ.10ಕ್ಕೆ ಕೈವಲ್ಯ ಶ್ರೀಗಳ ಮಠ ಪ್ರವೇಶ:
ಉದ್ಘಾಟನಾ ಸಮಾರಂಭಕ್ಕೂ ಪೂರ್ವಭಾವಿಯಾಗಿ ಕೈವಲ್ಯ ಸ್ವಾಮೀಜಿ ಅವರು ಡಿ. 10ರಂದು ಸಂಜೆ ಶ್ರೀಮಠವನ್ನು ಪ್ರವೇಶ ಮಾಡುವರು‌. ಈ ಪ್ರಯುಕ್ತ ಅವರನ್ನು ಅಂದು ಸಂಜೆ 4.30ಗಂಟೆಗೆ ಪರ್ಕಳ ಹೈಸ್ಕೂಲು ಬಳಿಯಿಂದ ಭವ್ಯವಾದ ಶೋಭಾಯಾತ್ರೆಯ ಮೂಲಕ ಶ್ರೀಮಠಕ್ಕೆ ಕರೆತರಲಾಗುತ್ತದೆ. ಶ್ರೀಗಳು ಡಿ.17ರ ವರೆಗೆ ನೂತನ ಶಾಖಾ ಮಠದಲ್ಲಿ ಮೊಕ್ಕಾಂ ಇರಲಿದ್ದು, ಶ್ರೀ ಭವಾನೀ ಶಂಕರ ದೇವರ ಪೂಜೆ, ಶ್ರೀಗಳಿಗೆ ಭಿಕ್ಷಾ ಪ್ರದಾನ, ಪಾದ್ಯಪೂಜೆ ಇತ್ಯಾದಿಗಳು ನಡೆಯಲಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ, ಮಣಿಪಾಲ ಇದರ ನಿಕಟಪೂರ್ವ ಅಧ್ಯಕ್ಷ ಶ್ರೀಶಾ ನಾಯಕ್ ಪೆರ್ಣಂಕಿಲ, ನರಸಿಂಗೆ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಂಕಾರ್, ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಶಶಿಧರ ವಾಗ್ಳೆ, ಶ್ರೀ ದುರ್ಗಾಪರಮೇಶ್ವರಿ ಸೊಸೈಟಿಯ ಪರ್ಕಳ ಇದರ ಸಿಇಓ ನಿತ್ಯಾನಂದ ನಾಯಕ್, ಮಾಜಿ ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್ ಉಪಸ್ಥಿತರಿದ್ದರು.

ಕರ್ನಾಟಕದ ಆರನೇ ಮಠ:
ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ 17ನೇ ನೂತನ ಶಾಖಾ ಮಠ ಇದಾಗಿದೆ. ಕರ್ನಾಟಕ ರಾಜ್ಯ ಆರನೇ ಶಾಖಾ ಮಠ. ಉಳಿದಂತೆ ಕರ್ನಾಟಕದ ಬೆಳಗಾವಿ, ಗೋಕರ್ಣ, ಗಾನಾಪುರ, ಬೆಂಗಳೂರಿನ ಸದಾಶಿವನಗರದಲ್ಲಿ ಶಾಖಾ ಮಠಗಳಿವೆ.

ಭವ್ಯ ಶಾಖಾ ಮಠ:
ಉಡುಪಿಯ ನೂತನ ಶಾಖಾ ಮಠವನ್ನು ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸುಸಜ್ಜಿತ ಪ್ರವಚನ ಸಭಾಂಗಣ, ಶ್ರೀಗಳ ವಾಸ್ತವ್ಯದ ಕೊಠಡಿ, ದೇವರ ಪೂಜೆಗೆ ಬೇಕಾಗುವ ನೈವೇದ್ಯ ತಯಾರಿಸುವ ಕೊಠಡಿ, ಬೃಹತ್ ಭೋಜನ ಹಾಲ್ ಹಾಗೂ ಯಾಗ ಶಾಲೆಯನ್ನು ಶಾಖಾ ಮಠ ಒಳಗೊಂಡಿದೆ.