ಉಡುಪಿ: ಐದಕ್ಕಿಂತ ಹೆಚ್ಚು ಕೊರೊನಾ ಸೋಂಕು ಕಂಡುಬರುವ ಪ್ರದೇಶ ಸೀಲ್ ಡೌನ್; ಸುನಿಲ್ ಕುಮಾರ್

ಉಡುಪಿ: ಐದು ಅಥವಾ ಅದಕ್ಕಿಂತ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಕಂಡುಬರುವ ಪ್ರದೇಶವನ್ನು ಮೈಕ್ರೋ ಕಂಟೋನ್ಮೆಂಟ್ ಜೋನ್ (ಸೀಲ್ ಡೌನ್) ಮಾಡಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಹೇಳಿದರು.

ಉಡುಪಿ ಜಿಲ್ಲೆಯ ಕೋವಿಡ್ ನಿರ್ವಹಣೆ ಮತ್ತು ಪ್ರಾಕೃತಿಕ ವಿಕೋಪದ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದರು.

ಸಾಧ್ಯವಾದಷ್ಟು ಕೋವಿಡ್ ಪೋಸಿಟಿವ್ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಾಗುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಹೊಸದಾಗಿ 50 ಐಸಿಯು ಬೆಡ್ ಗಳ ನಿರ್ಮಾಣವನ್ನು ಚುರುಕಾಗಿ ಕೈಗೊಂಡು ಆಗಸ್ಟ್ ಅಂತ್ಯದೊಳಗೆ ಸೇವೆಗೆ ಲಭ್ಯವಾಗುವಂತೆ ಮಾಡಬೇಕೆಂದು ಸೂಚಿಸಿದರು. ಕೋವಿಡ್ ಲಸಿಕೆ ಲಭ್ಯತೆ, ನೀಡುವಿಕೆ ಮತ್ತು ಹೆಚ್ಚುವರಿ ಲಸಿಕೆಯನ್ನು ಪಡೆಯುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಆದ ಹಾನಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಎಸ್ ಡಿ ಆರ್ ಎಫ್ ಅನ್ನು ಉಡುಪಿ ಯಲ್ಲಿ ಪ್ರಾರಂಭಿಸುವ ಬಗ್ಗೆ ಮನವಿ ಸಲ್ಲಿಸಲು ಹಾಗೂ ಚಂಡಮಾರುತ ದಿಂದ ಮೂಲಭೂತ ಸೌಕರ್ಯಗಳಿಗೆ ಉಂಟಾದ ಹಾನಿ ಬಗ್ಗೆ 100 ಕೋಟಿ ಅನುದಾನ ಪ್ರಸ್ತಾಪವನ್ನು ಫಾಲೋ ಅಪ್ ಮಾಡಲು ತೀರ್ಮಾನಿಸಲಾಯಿತು. ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ 48 ತಾಸುಗಳ ಒಳಗಾಗಿ ಪರಿಹಾರ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬೈಂದೂರ್ ಶಾಸಕ ಸುಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈ. ನವೀನ್ ಭಟ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.