ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ದೇವೇಗೌಡ ದಂಪತಿ 

ಉಡುಪಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಂಗಳವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು.
ಪತ್ನಿ ಚೆನ್ನಮ್ಮ ಅವರೊಂದಿಗೆ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆದ ದೇವೇಗೌಡರು, ಮಠದ ಸುವರ್ಣ ಗೋಪುರ ಯೋಜನೆ ಬಗ್ಗೆ ತಿಳಿದುಕೊಂಡರು. ಬಳಿಕ ಪರ್ಯಾಯ ಪಲಿಮಾರು ಶ್ರೀವಿದ್ಯಾ ಧೀಶ ತೀರ್ಥ ಸ್ವಾಮೀಜಿ ಅವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ಶ್ರೀಕೃಷ್ಣ ಪ್ರಸಾದ ಸ್ವೀಕರಿಸಿದರು.
ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಮುಖಂಡರಾದ ಶಾಲಿನಿ ಶೆಟ್ಟಿ ಕೆಂಚನೂರು, ಮಠದ ಕಾರ್ಯದರ್ಶಿ ಗಿರೀಶ್ ಉಪಾಧ್ಯಾಯ, ಪಿಆರ್‌ಓ ಶ್ರೀಶ ಭಟ್ ಕಡೆಕಾರ್ ಉಪಸ್ಥಿತರಿದ್ದರು.