ಕೃಷ್ಣಮಠದಲ್ಲಿ ಸದ್ಯ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇಲ್ಲ: ಜುಲೈ ಬಳಿಕ ಮುಂದಿನ ತೀರ್ಮಾನ: ಈಶಪ್ರಿಯ ಸ್ವಾಮೀಜಿ

ಉಡುಪಿ: ರಾಜ್ಯ ಸರ್ಕಾರ ಜೂನ್ 8ರಿಂದ ದೇವಸ್ಥಾನಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಉಡುಪಿ ಶ್ರೀಕೃಷ್ಣಮಠದಲ್ಲಿ ಜನರು ದೇವರ ದರ್ಶನ ಪಡೆಯಲು ಇನ್ನೂ 20ರಿಂದ 30 ದಿನಗಳ‌ ತನಕ ಕಾಯಬೇಕಾಗಿದೆ. ಸದ್ಯಕ್ಕೆ ಕೃಷ್ಣಮಠ ತೆರೆಯುವುದಿಲ್ಲ.
ಈ ಬಗ್ಗೆ ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ವಿಡಿಯೋ ಹೇಳಿಕೆ ಮೂಲಕ ಮಾಹಿತಿ ನೀಡಿದ್ದಾರೆ.
ಭಕ್ತರ ಹಿತದೃಷ್ಟಿಯಿಂದ ಹಾಗೂ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ನಾವು ಇನ್ನೂ ಒಂದು ತಿಂಗಳ ಕಾಲ ಕಾಯುತ್ತೇವೆ. ಮುಂದಿನ ಬೆಳವಣಿಗೆ ನೋಡಿಕೊಂಡು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸುತ್ತೇವೆ. ಒಮ್ಮೆಲೆ ದೇವರ ದರ್ಶನಕ್ಕೆ ಅವಕಾಶ ನೀಡಿದರೆ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಹಾಗಾಗಿ ನಾವು ಭಕ್ತರು ಹಾಗೂ ಮಠದ ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ದರ್ಶನವನ್ನು ಮುಂದುಡುತ್ತಿದ್ದೇವೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಕೃಷ್ಣಮಠದಲ್ಲಿ ಯತಿಗಳೇ ಪೂಜೆ ಮಾಡುವ ಪರಂಪರೆ ನಡೆದುಕೊಂಡು ಬಂದಿದ್ದು, ಯಾರಿಗೂ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ನಾವು ಸೋಮವಾರ ದೇವಸ್ಥಾನ ತೆರೆಯುವುದಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಮಠದಲ್ಲಿ ಪ್ರತಿದಿನ ನಿರ್ವಹಣೆಗೆ ಒಂದು ಲಕ್ಷ ಖರ್ಚು ತಗಲುತ್ತದೆ. ಲಾಕ್ ಡೌನ್ ವೇಳೆಯೂ ನಾವು ಸಿಬ್ಬಂದಿಗೆ ವೇತನ ನೀಡಿದ್ದೇವೆ. ಹಾಗಿದ್ದರೂ ನಾವು ದರ್ಶನ ಆರಂಭಿಸುವ ಬಗ್ಗೆ ಮುಂದೆ ನಿರ್ಧಾರ ಕೈಗೊಳ್ಳುತ್ತೇವೆ. ಕೊರೊನಾ ಸೋಂಕು ಶೀಘ್ರ ದೂರವಾಗಲಿ. ಆದಷ್ಟು ಬೇಗ ಭಾರತ ಕೊರೊನಾ ಮುಕ್ತವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಸ್ವಾಮೀಜಿ ಹೇಳಿದರು.