ಜುಲೈ 1ರಂದು ಕೃಷ್ಣಮಠದಲ್ಲಿ ಯತಿವರ್ಯರಿಗೆ ತಪ್ತಮುದ್ರಾಧಾರಣೆ: ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಅವಕಾಶ

ಉಡುಪಿ: ಚಾತುರ್ಮಾಸ ವೃತಾಚರಣೆಯ ಆರಂಭದ ಆಷಾಢ ಶುದ್ಧ ಏಕಾದಶಿಯಂದು‌ ಶ್ರೀಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ಮಾಡುವುದು ಸಂಪ್ರದಾಯ. ಅದರಂತೆ ಜುಲೈ 1ರ ಏಕಾದಶಿಯಂದು ಶ್ರೀಕೃಷ್ಣಮಠದಲ್ಲಿ ತಪ್ತಮುದ್ರಾಧಾರಣೆ ಸಂಬಂಧಿಸಿದ ಸಕಲ ಧಾರ್ಮಿಕ ಕಾರ್ಯಗಳು ಶಾಸ್ತ್ರೋಕ್ತವಾಗಿ ನಡೆಯಲಿದ್ದು, ಈ ಕಾರ್ಯಕ್ರಮ ಯತಿವರ್ಯರಿಗೆ ಮಾತ್ರ ಸೀಮಿತವಾಗಿರುತ್ತದೆ. ಮುಂದಿನ ಯಾವುದಾದರೂ ಶುಭ ದಿನಗಳಲ್ಲಿ ಸಾರ್ವಜನಿಕರಿಗೆ ಮುದ್ರಾಧಾರಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ‌ ಹೇಳಿದರು.
ಜೂನ್ 30ರಂದು ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ದೇವರಿಗೆ ವಾರ್ಷಿಕ ಮಹಾಭಿಷೇಕ (ಸೀಯಾಳ ಅಭಿಷೇಕ) ಜರುಗಲಿದೆ. ಆದರೆ ಕೋವಿಡ್ 19 ನಿಂದಾಗಿ ಭಕ್ತರಿಗೆ ಮಠಕ್ಕೆ ಪ್ರವೇಶ ಇಲ್ಲದಿರುವುದರಿಂದ ಅಭಿಷೇಕ ಮಾಡಲು ಸೀಯಾಳ ನೀಡಲು ಬಯಸುವ ಭಕ್ತರು ರಾಜಾಂಗಣದ ಉತ್ತರ ದ್ವಾರದ ಬಳಿ ಜೂನ್ 28ರ ಸಂಜೆಯೊಳಗೆ ತಲುಪಿಸಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.