ಉಡುಪಿ ಕೃಷ್ಣಮಠದಲ್ಲಿ ಸೆ. 10, 11ರಂದು ಕೃಷ್ಣಜನ್ಮಾಷ್ಟಮಿ: ಕೊರೊನಾ ಹಿನ್ನೆಲೆ ಸಾರ್ವಜನಿಕವಾಗಿ ಆಚರಣೆ ಇಲ್ಲ

ಉಡುಪಿ: ಇಲ್ಲಿನ ಶ್ರೀಕೃಷ್ಣಮಠದಲ್ಲಿ ಸೌರಮಾನ ಪಂಚಾಂಗದ ಪ್ರಕಾರ ಕೃಷ್ಣಜನ್ಮಾಷ್ಟಮಿ ಆಚರಣೆ ಮಾಡುವುದರಿಂದ ಆಗಸ್ಟ್ 11 ಮತ್ತು 12 ರಂದು ಉಡುಪಿಯಲ್ಲಿ ಅಷ್ಟಮಿಯ ಸಂಭ್ರಮ ಇರುವುದಿಲ್ಲ. ಬದಲಾಗಿ ಸೆಪ್ಟೆಂಬರ್‌ 10ರಂದು ಕೃಷ್ಣಜನ್ಮಾಷ್ಟಮಿ ಹಾಗೂ ಸೆ. 11ರಂದು ಶ್ರೀಕೃಷ್ಣ ಲೀಲೋತ್ಸವ ಆಚರಣೆ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
ದೇಶದಾದ್ಯಂತ ಆ. 11ರಂದು ಕೃಷ್ಣಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತದೆ. ಆದರೆ ಇದು ಚಾಂದ್ರಮಾನ ಪಂಚಾಂಗದ ಪ್ರಕಾರ ಬರುವ ಕೃಷ್ಣಾಷ್ಟಮಿ ಆಗಿರುವುದರಿಂದ ಕೃಷ್ಣಮಠದಲ್ಲಿ ಇದನ್ನು ಆಚರಣೆ ಮಾಡುವುದಿಲ್ಲ.
ಕೃಷ್ಣಮಠದಲ್ಲಿ ಸೆ. 10ರಂದು ಮಧ್ಯರಾತ್ರಿ 12.15 ಗಂಟೆಗೆ ಚಂದ್ರೋದಯ ಕಾಲದಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. ಮರುದಿನ ಸೆ. 11 ರಂದು ರಥಬೀದಿಯಲ್ಲಿ ಶ್ರೀಕೃಷ್ಣ ಲೀಲೋತ್ಸವದ ಸಂಭ್ರಮ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಾರ್ವಜನಿಕವಾಗಿ ಅಷ್ಟಮಿ ಆಚರಣೆಯಿಲ್ಲ:
ಕೊರೊನಾ ಹಿನ್ನೆಲೆಯಲ್ಲಿ ಇನ್ನೂ ಸಹ ಕೃಷ್ಣಮಠದಲ್ಲಿ ಸಾರ್ವಜನಿಕರು, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿಲ್ಲ. ಈ ನಿರ್ಬಂಧ ಇನ್ನೂ ಮುಂದುವರಿಯುವ ಸಾಧ್ಯತೆ ಇರುವುದರಿಂದ ಕೃಷ್ಣಮಠದಲ್ಲಿ ಸಾರ್ವಜನಿಕವಾಗಿ ಅಷ್ಟಮಿ ಆಚರಣೆ ಇರುವುದಿಲ್ಲ. ಸ್ವಾಮೀಜಿಗಳು, ಮಠದ ಆಡಳಿತ ಮಂಡಳಿಯ ಪದಾಧಿಕಾರಿಗಳು ಒಳಗೊಂಡಂತೆ ಸಂಪ್ರದಾಯದಂತೆ ಸಾಂಕೇತಿಕವಾಗಿ ಅಷ್ಟಮಿ ಆಚರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.