ಶಾಲಾ ಮಕ್ಕಳಿಗೆ ಫೋಸ್ಕೋ ಕಾಯಿದೆ ಕುರಿತು ಅರಿವು ಮೂಡಿಸಲಾಗುವುದು: ಫೋನ್ ಇನ್ ಕಾರ್ಯಕ್ರಮದಲ್ಲಿ ಎಸ್.ಪಿ ಭರವಸೆ

ಉಡುಪಿ: ಶಾಲಾ ಮಕ್ಕಳಿಗೆ ಫೋಕ್ಸೊ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲು ಚಿಂತನೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.
ಶುಕ್ರವಾರ ಉಡುಪಿ ಎಸ್ಪಿ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
 ಶಾಲಾ ವಿದ್ಯಾರ್ಥಿಗಳಿಗೆ ಫೋಕ್ಸೊ ಕಾಯ್ದೆಯ ಬಗ್ಗೆ ಮೊದಲೇ ಜಾಗೃತಿ, ತಿಳುವಳಿಕೆ ನೀಡಬೇಕು, 6ನೇ ತರಗತಿಯಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ವತಿಯಿಂದ ತಿಳುವಳಿಕೆ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದರೆ ಉತ್ತಮ  ಎಂದು ಸಾರ್ವಜನಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ ಪಿ, ಈ ಕುರಿತು ಖಂಡಿತವಾಗಿಯೂ ಯೋಜನೆ ಹಾಕಲಾಗುವುದು. ಮಕ್ಕಳಿಗೆ ಫೋಕ್ಸೊ ಕಾಯ್ದೆ ಕುರಿತು ಮಾಹಿತಿ ಹಾಗೂ ತಿಳುವಳಿಕೆ ಮೂಡಿಸಲು ಪ್ರಯತ್ನಿಸುತ್ತೇವೆ, ಕಿರುಚಿತ್ರ ಅಥವಾ ಪ್ರಾತ್ಯಕ್ಷಿಕೆಗಳ ಮೂಲಕ ನೀಡಬೇಕೆ ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ನೀಡಬೇಕೇ ಎನ್ನುವ ಬಗ್ಗೆ ಯೋಚಿಸುತ್ತೇವೆ ಎಂದರು.
ಹಿರಿಯ ನಾಗರಿಕರಿಗೆ ವಾಹನ ಸವಾರರಿಂದ ತೊಂದರೆ:
ಸಾರ್ವಜನಿಕರೊಬ್ಬರು ಕರೆ ಮಾಡಿ, ಅಂಬಾಗಿಲು-ಪೆರಂಪಳ್ಳಿ- ಮಣಿಪಾಲ ರಸ್ತೆಯಲ್ಲಿ  ಹಗಲಿನಲ್ಲಿ ಹೆಲ್ಮೆಟ್ ಹಾಕದೇ ಅತೀ ವೇಗವಾಗಿ ದ್ವಿಚಕ್ರವಾಹನಗಳನ್ನು ಚಲಾಯಿಸುತ್ತಾರೆ. ಇದರಿಂದ ಹಿರಿಯ ನಾಗರಿಕರಿಗೆ ಹಾಗೂ ಅಶಕ್ತರಿಗೆ ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಪರ್ಕಳ- ಮಣಿಪಾಲ, ಅಂಬಾಗಿಲು-ಮಣಿಪಾಲ ಮಾರ್ಗದಲ್ಲಿ ಇಂತಹ ಸಮಸ್ಯೆಗಳು ಹೆಚ್ಚಾಗಿದೆ.  ಈ ಬಗ್ಗೆ ವಾರದಲ್ಲಿ  ವಿಶೇಷ ಕಾರ್ಯಾಚರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಬಾರ್ಕೂರಿನ ಆಕಾಶವಾಣಿ ಕೇಂದ್ರ ಬಳಿ‌ ಟೂರಿಸ್ಟ್ ಬಸ್ ಗಳನ್ನು ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸದೆ, ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ನಿಲ್ಲಿಸಲಾಗುತ್ತದೆ ಎಂದು ಸ್ಥಳೀಯರೊಬ್ಬರು ದೂರಿದರು.
ಈ ಬಗ್ಗೆ ಪರಿಶೀಲನೆ ನಡೆಸಿ, ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಹೇಳಿದರು.
ಪರ್ಮಿಟ್ ಇಲ್ಲದ ಬಸ್ ಗಳ ಬಗ್ಗೆ ನಿಗಾವಹಿಸಿ:
ಗಂಗೊಳ್ಳಿಯಲ್ಲಿ ಸರ್ವಿಸ್ ಬಸ್ ಗಳು ರಾ.ಹೆ.ಯಲ್ಲಿಯೇ ಬಸ್ ನಿಲುಗಡೆ ಮಾಡುತ್ತಿವೆ. ಕೆಲವೊಂದು ಪರ್ಮಿಟ್ ಇಲ್ಲದ ಬಸ್ ಗಳು ಸಂಚರಿಸುತ್ತಿವೆ. ಹಾಗಾಗಿ ಈ ಬಗ್ಗೆ ವಿಶೇಷ ನಿಗಾ ವಹಿಸಿ ಕಾರ್ಯಾಚರಣೆ ಮಾಡುವಂತೆ ಸಾರ್ವಜನಿಕರೊಬ್ಬರು ಎಸ್ಪಿಗೆ ಸಲಹೆ ನೀಡಿದರು.
ಅಜ್ಜರಕಾಡಿನ ಭುಜಂಗ್ ಪಾರ್ಕ್ ನಲ್ಲಿ ರಾತ್ರಿ ವೇಳೆ ದಾರಿದೀಪಗಳು ಊರಿಯುತ್ತಿಲ್ಲ. ಇದರಿಂದ ಅಕ್ರಮ ಚಟುವಟಿಕೆಗಳು ನಡೆಯುವ ಸಾಧ್ಯತೆಯಿದೆ. ಹಾಗಾಗಿ ಕೂಡಲೇ ದಾರಿ ದೀಪ ಸರಿಪಡಿಸುವಂತೆ ಸ್ಥಳೀಯರೊಬ್ಬರು ಎಸ್ಪಿಗೆ ಮನವಿ ಮಾಡಿದರು.