ಉಡುಪಿ: ಹಿರಿಯ ಸಾಹಿತಿ ಡಾ. ಉಪ್ಪಂಗಳ ರಾಮಭಟ್ ಇನ್ನಿಲ್ಲ

ಉಡುಪಿ: ಕನ್ನಡದ ಹಿರಿಯ ಸಾಹಿತಿ, ವಿದ್ವಾಂಸ ಡಾ. ಉಪ್ಪಂಗಳ ರಾಮಭಟ್ (81) ಅವರು ಇಂದು ನಿಧನ ಹೊಂದಿದರು.

ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಇವರು ಕಳೆದ ನಾಲೈದು ದಶಕಗಳಿಂದ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಸಂಶೋಧನೆ, ವಿಮರ್ಶೆ, ಮುಕ್ತಕ ಕವನ ರಚನೆ, ಪ್ರವಾಸ, ನಾಟಕ, ಜೀವನ ಚಿತ್ರಣ, ಅನುವಾದ, ವರ್ತಮಾನ ಸಾಮಾಜಿಕ ಸಮಸ್ಯೆಗಳು ಮೊದಲಾದ ವಿಚಾರಗಳಲ್ಲಿ ಲೇಖನ, ಕೃತಿ ರಚನೆ ಮಾಡಿದ್ದಾರೆ. ಕನ್ನಡ ವ್ಯಾಕರಣ, ಗಡಿನಾಡು ತುಳುನಾಡಿನ ಕುರಿತಾದ ಅವರ ಮೌಲಿಕ ಸಂಶೋಧನೆಗಳು ವಿದ್ವಾಂಸರ ಗಮನ ಸೆಳೆದಿವೆ.

ಸಾವಿರಕ್ಕೂ ಮಿಕ್ಕಿದ ಅವರ ಮುಕ್ತಕಗಳು, ಕವನಗಳು, ವಿಮರ್ಶನ ಕೃತಿಗಳು ವಿವಿಧ ಪ್ರಶಸ್ತಿಗಳ ಗೌರವ ಪಡೆದಿವೆ. ಸಂಪನ್ಮೂಲ ವ್ಯಕ್ತಿಗಳಾಗಿ, ನಿರ್ದಿಷ್ಟ ಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಭಾಷಣ, ಗಮಕ ಪ್ರವಚನ ಮಾಡಿದ್ದಾರೆ. ಅವರ ಕಾವ್ಯನಾಮ ‘ಅಕಲಂಕ’ ಹೆಸರಿನಲ್ಲಿ ಎಪ್ಪತ್ತರ ವಯಸ್ಸಿನಲ್ಲಿ ಅವರಿಗೆ ಅಭಿಮಾನಿಗಳು ಸಂಭಾವನ ಗ್ರಂಥವನ್ನು ಅರ್ಪಿಸಿ ಗೌರವಿಸಿದ್ದಾರೆ.

(2010) ಅವರ ಹೆತ್ತವರ ಬಗೆಗೆ, ಅಭಿಮಾನಿಗಳ ಲೇಖನಗಳಿಂದ ಕೂಡಿದ ‘ಪರಮ’ ಎಂಬ ನೆನಪಿನ ಗ್ರಂಥವನ್ನವರು ಪ್ರಕಟಿಸಿದ್ದಾರೆ (2013), ‘ಕನ್ನಡ ನುಡಿ ನಡೆ’ ಕನ್ನಡದ ಮೌಲಿಕ ವಿಚಾರಗಳನ್ನೊಳಗೊಂಡ ಸಂಶೋಧನ ಕೃತಿ-ಹಳೆಗನ್ನಡದ ಮೂಲಾಂಶಗಳುಳ್ಳ ‘ಹವಿಕ’ ಆ ಭಾಷೆ ಸಂಸ್ಕೃತಿಗಳ ಸಂಶೋಧನಾತ್ಮಕ ಕೃತಿ. ಆರು ಜನ ಸಂಶೋಧಕ ವಿದ್ವಾಂಸರಿಗೆ ಮಾರ್ಗದರ್ಶನ ಮಾಡಿದ್ದರು.

ಅಕಲಂಕ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿ ದತ್ತಿಯನ್ನು ಕಸಾಪದಲ್ಲಿ ಇಟ್ಟಿದ್ದರು. ಅದರ ಮೂಲಕ ಪ್ರತಿ ವರ್ಷ ಒಬ್ಬ ಹಿರಿಯ ಸಾಹಿತಿ ಸಂಶೋಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಕಾಸರಗೋಡು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಉಡುಪಿ ತಾಲ್ಲೂಕು ಕಸಾಪ ಪೂರ್ವಾಧ್ಯಕ್ಷರಾಗಿದ್ದರು.

ಡಾ. ಪ್ರೊ. ಉಪ್ಪಂಗಳರ ಕೃತಿಗಳು:

1. ಪಂಚವಟಿ (ಮೈಥಿಲೀಶರಣಗುಪ್ತರ ಹಿಂದೀ ಬಂಡಕಾವ್ಯದ ಕನ್ನಡ ಅನುವಾದ- 1982

2. ಅಂತರಂಗ (ವಿಮರ್ಶನ ಪ್ರಬಂಧಗಳ ಸಂಕಲನ) – 1985

3. ಕನ್ನಡ ವೈಯಾಕರಣ ಭಟ್ಟಾಕಲಂಕ (ಕವಿ, ಕೃತಿ ಪರಿಚಯ) – 1986 ( ಕರ್ಣಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ವಿಜೇತ ಕೃತಿ)

4. ಮಾನಸ (ಭಾಷಾವಿಜ್ಞಾನ ಸಂಬಂಧಿ ಲೇಖನಗಳು) – 1990

5. ಗಡಿನಾಡು ಕಾಸರಗೋಡು (ಇತಿಹಾಸ, ಸಾಹಿತ್ಯ, ಸಂಸ್ಕೃತಿ ಕುರಿತ ಸಂಶೋಧನ ಕೃತಿ)- 1994

6. ಕವಿಮಾರ್ಗ (ವಿಮರ್ಶಾತ್ಮಕ ಪ್ರಬಂಧಗಳ ಸಂಕಲನ, (ಡಾ| ಹಾ.ಮಾ.ನಾ. ದತ್ತಿ ಪ್ರಶಸ್ತಿ ವಿಜೇತ) – 1996

7. ಕರ್ನಾಟಕ ಶಬ್ದಾನುಶಾಸನ ವಿವೇಚನೆ (ಸಂಶೋಧನೆ, ಪಿ.ಎಚ್.ಡಿ. ಮಹಾಪ್ರಬಂಧ)- 1996

8. ಸಂಚಾರ ಸಂಪುಟ (ಪ್ರವಾಸಕಥನ) – 1997 –

9. ಅತಿಥಿ – ಅಪಹರಣ (ಎರಡು ಕಿರುನಾಟಕಗಳು) – 1999

10. ಸಾಹಿತ್ಯ – ಏನು? ಏಕೆ? ಹೇಗೆ? (ಪ್ರಬಂಧ) –1999

11. ವಿಕಿರಣ (ವೈಚಾರಿಕ ಲೇಖನಗಳು) – 2000

12. ಒಲಿದು ಬಂದವರ (ಕಿರುನಾಟಕ) – 2000

13. ಬಾಳನೋಟ (500 ಮುಕ್ತಕಗಳು, ಅತ್ತಿಮಬ್ಬೆ ಪ್ರತಿಷ್ಠಾನದ ರನ್ನ ಸಾಹಿತ್ಯ ಪ್ರಶಸ್ತಿ) – 2002

14. ಪುಕ್ಕದೊಳಗಿನ ಹಕ್ಕಿ (ಕವನ ಸಂಕಲನ, ಕಡೆಂಗೊಡ್ಲು ಕಾವ್ಯಪ್ರಶಸ್ತಿ) – 2002

15. ಆಸರೆಗಾಗಿ (ಸಣ್ಣಕಥೆ – ಮಾಸ್ತಿ ಕನ್ನಡಕಥಾ ಪ್ರಶಸ್ತಿ, ಮುಂಬೆಳಕು, ಕನ್ನಡಬಳಗ, ಮುಂಬೈ) – 2002

16. ನೆಲಸಂಪಗೆ (ಕೆಲವು ಮಹನೀಯರ ನುಡಿಚಿತ್ರಗಳು) – 2003

17. ಸಂಗತಿ (ವಿಮರ್ಶನ, ವಿಚಾರ, ಸಂಶೋಧನ ಲೇಖನಗಳು, ಕುವೆಂಪು ಶತಮಾನೋತ್ಸವ ಮಾಲಿಕೆ, 2004 ಕ.ಸಾ.ಪ. ಬೆಂಗಳೂರು)

18. ಬಾಳ ಬೆಳಕು (500 ಮುಕ್ತಕಗಳು) – 2006

19. A Chat with Scholar (ಸಂಶೋಧನ ಲೇಖನಗಳು, ಇಂಗ್ಲಿಷ್‌ನಲ್ಲಿ) – 2005

20. ಮೋಹದ ಸಬಲೆ ಮತ್ತು ಇತರ ಸಣ್ಣ ಕಾವ್ಯಗಳು (ಕ.ಸಾ.ಪ. ಬೆಂಗಳೂರು) -2007

21. ಗಡಿನಾಡು ಈ ತುಳುಕನ್ನಡ ಬೀಡು (ಸಂಶೋಧನೆ, ಸ್ವಾಗತಸಮಿತಿ, ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಉಡುಪಿ) – 2007

22. ಪಯಣ (ಕಥೆಗಳು) – 2007

23. ಸಂಚಯ (ಸಂಶೋಧನೆ, ವಿಚಾರ, ಸಂಸ್ಕರಣೆ, ನಲ್ನುಡಿಗಳು) – 2008

24. ಬೇರು-ಚಿಗುರು (ದಶಕವೇಳರ ನೆನಪು, ತನ್ನ ತಾನರಿದಂತೆ) – 2009

25. ಭಾವನಾದ (ಕವನಗಳು) – 2010

26. ಅಕಲಂಕ (70ರ ನೆನಪಿನ ಸಂಭಾವನ ಗ್ರಂಥ) – 2010

27. ಕನ್ನಡ ನುಡಿನಡೆ (ಕನ್ನಡಭಾಷೆ, ವ್ಯಾಕರಣ, ಭಾಷಾವಿಜ್ಞಾನ, ಛಂದಸ್ಸು ಸಂಬಂಧಿತ ಲೇಖನಗಳು) – 2011

28. ಜನಪದ ನುಡಿ ‘ಹವಿಕ’ – 2013

29. ಪರಮ (ನೆನಪಿನ ಸಂಪುಟ) ಸಹಸಂಪಾದಿತ – 2013

30. ಮಂಥನ – ವೈಚಾರಿಕ ಲೇಖನಗಳು – 2014

ಸಂಪಾದಿತ ಕೃತಿಗಳು

1. ಅಶ್ವತ್ಥ (ಡಿ.ವಿ.ಜಿ. ಅವರ ಜನ್ಮಶತಮಾನೋತ್ಸವ ನೆನಪು) – 1987

2. ಅಷ್ಟಮ (8ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಚಿಕೆ) – 1995

3. ಸುವರ್ಣಪಥದಲ್ಲಿ ಎಂಜಿಎಂ ಕಾಲೇಜು (ಎಂಜಿಎಂ ಕಾಲೇಜಿನ ಚಿನ್ನದ ಹಬ್ಬದ ಸಂಚಿಕೆ)- 1998-99

4. ಉದ್ಯಮ (ಸಹಸಂಪಾದಿತ, ಪ್ರೋಗ್ರೆಸ್ಸಿವ್ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದ ಸಂಚಿಕೆ) – 1999

5. ವೇಲಾಪುರ ಮಹಾತ್ಮ್ಯ (ಐಲ ದುರ್ಗಾಪರಮೇಶ್ವರೀ ದೇವಸ್ಥಾನದ ಸ್ಥಳಪುರಾಣ, ಸಂಸ್ಕೃತ-ಕನ್ನಡ ಭಾವಾನುವಾದ ಸಹಿತ) – 2003

ಅಪ್ರಕಟಿತ ಕೃತಿಗಳು

1. ಕುಮಾರಸಂಭವ ಐದನೇ ಸರ್ಗ (ಅನುವಾದ)

2. ಸೀತಾಪರಿತ್ಯಾಗ, ಬೇರಿಲ್ಲದ ಬಳ್ಳಿ, ಮುಗ್ಧ ಭಕ್ತಿ (ಕಿರುನಾಟಕಗಳು)

3. ಕಾರ್ಗಿಲ್ ವೀರ (ಕಿರುನಾಟಕ)