»ಪಿ.ಲಾತವ್ಯ ಆಚಾರ್ಯ ಉಡುಪಿ.
15ನೇ ಶತಮಾನದಲ್ಲಿ ದಾಸಸಾಹಿತ್ಯದ ಕ್ರಾಂತಿಗೆ ಶ್ರೀಕೃಷ್ಣನ ಉಡುಪಿ ಕ್ಷೇತ್ರವೇ ತವರೂರಾಯಿತು ಶ್ರೀವ್ಯಾಸರಾಜರು, ಶ್ರೀವಾದಿರಾಜರು. ಶ್ರೀಪುರಂದರದಾಸರು, ಶ್ರೀಕನಕದಾಸರು, ಶ್ರೀವಿಜಯೀಂದ್ರರ ನೇತೃತ್ವದಲ್ಲಿ ನೂರಾರು ಕೃತಿಗಳು ಉಡುಪಿಯಲ್ಲಿ ಅನಾವರಣಗೊಂಡಿತು. ಉಡುಪಿ ಶ್ರೀಕೃಷ್ಣ ನ ಕುರಿತಾಗಿಯೇ ಅಸಂಖ್ಯ ಗದ್ಯ ಪದ್ಯಗಳು ರಚಿತವಾಯಿತು. ತಂಬೂರಿ ಮೀಟಿ,ಗೆಜ್ಜೆ ಕಟ್ಟಿ, ಶುದ್ಧಭಕ್ತಿ,ಮುಗ್ಧ ಹೃದಯದಿಂದ ಭಜಿಸಿ ನಲಿದ ಸಂತರಿಗೆ ಉಡುಪಿಯು ಸಾಕ್ಷಾತ್ಕಾರದ ನೆಲೆಯಾಯಿತು.
ಕನಕದಾಸರ ಅಂತರಾಳದ ಕೂಗಿಗೆ ಕಡೆಗೋಲಕೃಷ್ಣ ದರುಶನವನ್ನು ಕರುಣಿಸಿದ. ದಾಸಸಾಹಿತ್ಯದ ಸ್ವಣ೯ಯುಗವೆಂದೇ ಬಿಂಬಿತವಾದ ಈ ಪವ೯ಕಾಲದಲ್ಲಿ ಸಮಸ್ತ ಉಡುಪಿಯು ಸಂಗೀತಮಯವಾಯಿತು.
ಹೌದು ಉಡುಪಿಕೃಷ್ಣನಿಗೂ ಸಂಗೀತಕ್ಕೂ ಅವಿನಾಭಾವ ಸಂಬಂಧವಿದೆ. 8 ಶತಮಾನಗಳ ಪೂವ೯ದಲ್ಲಿ ದ್ವಾರಕೆಯಿಂದ ಬಂದ ಹಡಗಲಿ ಗೋಪಿಹೆಂಟೆಯೊಳಗೆ ಹುದುಗಿದ್ದ ಕಡಗೋಲು ಕೃಷ್ಣನ ದಿವ್ಯ ಪ್ರತಿಮೆಯನ್ನು ಆಚಾಯ೯ಮಧ್ವರು ಮಲ್ಪೆಯ ಕಡಲ ಕಿನಾರೆಯಲ್ಲಿ ಹಡಗಿನ ಕಪ್ತಾನನಿಂದ ಪಡೆದುಕೊಂಡರು. ಆ ಕೃಷ್ಣಮೂತಿ೯ಯ ಮೆರುಗಿಗೆ ಮಾರುಹೋದ ಆಚಾಯ೯ರು ಸಂತಸ ಸಂಭ್ರಮದಿಂದ ದ್ವಾದಶ ಸ್ತೋತ್ರವನ್ನು ಹಾಡುತ್ತಾ ಉಡುಪಿಗೆ ತಂದು ಪವ೯ಕಾಲದಲ್ಲಿ ಪ್ರತಿಷ್ಠಾಪಿಸಿದರು.
ಪ್ರಸಿದ್ಧ ಸಂಗೀತ ವಿದ್ವಾಂಸರಾಗಿದ್ದ ಶ್ರೀಮಧ್ವಾಚಾಯ೯ರ ಹಾಡುಗಾರಿಕೆಯ ಆಕಷ೯ಣೆ ಹೇಗಿತ್ತೆಂದರೆ ಆಚಾಯ೯ರು ಹಾಡಲಾರಂಭಿಸಿದರೆ ಗಂಧವ೯ರು, ದೇವತೆಗಳು ನಿಬ್ಬೆರಗಾಗುತ್ತಿದ್ದರು ಎಂದು ಆಚಾಯ೯ರ ಆತ್ಮೀಯ ಶಿಷ್ಯರಾಗಿದ್ದ ಶ್ರೀತ್ರಿವಿಕ್ರಮ ಪಂಡಿತಾಚಾಯ೯ರು ತಮ್ಮ ಕೃತಿಯಲ್ಲಿ ಉಲ್ಲೇಖಿಸುತ್ತಾರೆ. ಅಂತಹ ಪಾಂಡಿತ್ಯವನ್ನು ಹೊಂದಿದ್ದ ಆಚಾಯ೯ರು ಕೃಷ್ಣ ಪ್ರತಿಷ್ಠೆಯ ನಂತರ ಕೃಷ್ಣನಿಗೆ 14 ಪೂಜೆಗಳ ಸಂಪ್ರದಾಯವನ್ನು ರೂಪಿಸಿ, ಪ್ರಾತಃಕಾಲದಿಂದ ರಾತ್ರಿಯ ಜೋಗುಳದವರೆಗೆ ಸಲ್ಲುವ ಕೃಷ್ಣನ ಪೂಜೆಗಳಲ್ಲಿ ವೇದಮಂತ್ರಗಳ ಜೊತೆಗೆ ಸಂಗೀತದ ಕಂಪನ್ನು ಕೂಡ ಸವರಿದರು.
ಶ್ರೀಮದಾಚಾರ್ಯರ ಕಾಲಾನಂತರ ಉಡುಪಿ ಅಷ್ಟಮಠದ ಅನೇಕ ಯತಿಗಳು ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಸಲ್ಲಿಸಿ ಪೊಡವಿಗೊಡೆಯ ಶ್ರೀ ಕೃಷ್ಣನಿಗೆ ಭಕ್ತಿಭಾವದಿಂದ ಸಂಗೀತಸೇವೆಯನ್ನು ಅಪಿ೯ಸಿ, ಸಾಕ್ಷಾತ್ಕರಿಸಿಕೊಂಡ ಅನೇಕ ಕಥೆಗಳು ಕೂಡಾ ಉಡುಪಿ ಮಠದ ಗುರುಪರಂಪರೆಯ ಇತಿಹಾಸಗಳ ಪುಟಗಳಲ್ಲಿ ದಾಖಲಾಗಿದೆ.
ಶ್ರೀಅದಮಾರು ಮಠದ ಮೂಲ ಯತಿಗಳಾದ ಶ್ರೀನರಸಿಂಹ ತೀಥ೯ರು, ಶ್ರೀಶೀರೂರುಮಠದ 2ನೇ ಯತಿಗಳಾದ ಶ್ರೀ ವಾಸುದೇವ ತೀಥ೯ರು, 8ನೇ ಯತಿಗಳಾದ ಶ್ರೀಕೃಷ್ಣತೀಥ೯ರು ಶ್ರೀ ಕಾಣಿಯೂರು ಮಠದ 16ನೇ ಯತಿಗಳಾದ ಶ್ರೀವಿಬುಧೇಶತೀಥ೯ರು ಹಾಗೂ ಇನ್ನೂ ಅನೇಕ ಯತಿಗಳು ಅಧ್ಯಾತ್ಮದ ಅಧ್ಯಯನದ ಜೊತೆಗೆ ಸಂಗೀತ ಸಾಧನೆಗೂ ಅಗ್ರಪ್ರಾಶಸ್ತ್ಯ ನೀಡಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡಿದ್ದರು. ಶ್ರೀಸೋದೆ ಮಠದ ಶ್ರೀವಾದಿರಾಜರ ಕಾಲದಲ್ಲಿ ಶ್ರೀಮಧ್ವಾಚಾರ್ಯರ ಸಂಗೀತದ ಕಂಪಿಗೆ ಮತ್ತಷ್ಟು ವೈಭವ ಹಾಗೂ ವೈಶಾಲ್ಯತೆ ಲಭಿಸಿತು.
ಕೃಷ್ಣಪೂಜೆಯೂ ಸಂಗೀತವೂ:
ಪ್ರಾತಃಕಾಲದಲ್ಲಿ ಶ್ರೀಕೃಷ್ಣದೇವರ ಗಭ೯ಗೃಹದ ಬಾಗಿಲು ತೆರೆಯುತ್ತಿದ್ದಂತೆ ಸುಪ್ರಭಾತವು ಆರಂಭವಾಗುತ್ತದೆ. ಶ್ರೀಕೃಷ್ಣನಿಗೆ ಸಲ್ಲುವ ಮೊದಲ ಪೂಜೆಯಾದ ನಿಮಾ೯ಲ್ಯ ವಿಸಜ೯ನೆಯ ಸಂದಭ೯ದಲ್ಲಿ ಮಠದ ಚಂದ್ರಶಾಲೆಯಲ್ಲಿ ಸುಶ್ರಾವ್ಯ ಕಂಠದಲ್ಲಿ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವೆನಿಸಿದ ಸಾಮವೇದದ ಪಠಣದ ಶ್ರವಣವು ತನುಮನಗಳಿಗೆ ಪಾವಿತ್ರ್ಯತೆಯ ಸ್ಪಶ೯ವನ್ನು ನೀಡಿದರೆ ಶ್ರೀಮಠದ ಮಹಾದ್ವಾರದ ಇಕ್ಕೆಲಗಳಲ್ಲಿ ಸಾಂಪ್ರದಾಯಿಕ ವಾದ್ಯಗಳಾದ ನಾದಸ್ವರ, ನಗಾರಿ, ಡೋಲು, ಶಂಖ ಹಾಗೂ ಬಾರತಂಬೂರಿಗಳ ತರಂಗಗಳು ಶ್ರೀಕೃಷ್ಣ ಪೂಜಾರಂಭದ ಸಂದೇಶವನ್ನು ಮಠದ ಪರಿಸರದೆಲ್ಲೆಡೆ ರವಾನಿಸುತ್ತವೆ. ದಾಸವರೇಣ್ಯರ ಉದಯರಾಗದ ಹಾಡುಗಳು ಭಕ್ತಿಯ ಸಂಚಲನವನ್ನು ಸೃಷ್ಟಿಸುತ್ತದೆ.
ಮಹಾಪೂಜೆಯ ನೖೆವೇದ್ಯ ಕಾಲದಲ್ಲಿ ” ಪ್ರೀಣಾಯಾವೋ ವಾಸುದೇವಂ “ಎಂಬ ಆಚಾಯ೯ ವಿರಚಿತ ದ್ವಾದಶಸ್ತೋತ್ರವು ಹಾಡಿನರೂಪದಲ್ಲಿ ಬಾಲಕೃಷ್ಣನಿಗೆ ನಿವೇದನೆಯಾಗುತ್ತಿದ್ದರೆ, ಗಭ೯ಗೃಹದ ದ್ವಾರದಲ್ಲಿ ಮಠದ ಭಾಗವತರು ಕೃಷ್ಣನ ಮಹಿಮೆಯನ್ನು ಸಾರುವ ಕೃತಿಗಳನ್ನು ಹಾಡುತ್ತಿರುತ್ತಾರೆ. ಮಹಾಪೂಜೆ ಮುಗಿಯುತ್ತಿದ್ದಂತೆ ಭಗವಂತನ ದಶಾವತಾರದ ಕಥೆಗಳನ್ನೊಳಗೊಂಡ “ದಶಾವತಾರ ಸ್ತುತಿ”ಯು ವಿನೂತನ ಅಶ್ವಧಾಟಿಯಲ್ಲಿ ಸಂಪನ್ನಗೊಳ್ಳುತ್ತದೆ. ಮಧ್ಯಾಹ್ನ ಪೂಜೆಯ ನಂತರ ಯತಿಗಳು ತೀಥ೯ ಪ್ರಸಾದ ಸೇವಿಸುವ ಸಂದಭ೯ದಲ್ಲೂ ಕೂಡಾ ಭಕ್ತರಿಂದ ಚೂಣಿ೯ಕೆಗಳು, ಹಾಡುಗಳು ಅನ್ನಬ್ರಹ್ಮನಿಗೆ ಸಮಪಿ೯ತವಾಗುತ್ತದೆ.
ರಾತ್ರಿ ಚಾಮರಸೇವೆಯ ಪೂಜಾ ನಂತರ “ಕೃಷ್ಣಾಷ್ಟಕ”ವೆಂದೇ ಪ್ರಖ್ಯಾತವಾಗಿರುವ ಪಾಲಾಯಾಚ್ಯುತ ಹಾಡು ಶ್ರೀಕೃಷ್ಣಪೂಜೆಯ ವೖೆಭವವನ್ನು ವಣಿ೯ಸುತ್ತದೆ.ರಾತ್ರಿಯ ರಥೋತ್ಸವದ ನಂತರ ಜರಗುವ ಕೃಷ್ಣನ ತೊಟ್ಟಿಲುಪೂಜೆಯ ಸಂಭ್ರಮಕ್ಕೆ ಭಕ್ತ ಸಮುದಾಯದ ಸಂಕೀತ೯ನಾ ಸಹಿತ ನರ್ತನವು ವಿಶಿಷ್ಟಸೊಬಗನ್ನು ನೀಡುತ್ತದೆ.
ಈ ಪೂಜೆಯ ನಂತರ ಚಂದ್ರಶಾಲೆಯ ಜಗಲಿಯಲ್ಲಿ ಅಷ್ಟಾವಧಾನ ಸೇವೆ ಸಲ್ಲುತ್ತದೆ. ಮೊದಲಿಗೆ 4 ವೇದ,ಪುರಾಣ, ವೇದಾಂತಶಾಸ್ತ್ರಗಳ ಕಿರುಚರಣಗಳ ಪಠಣವಾಗುತ್ತದೆ. ಪದ್ಯ ಗದ್ಯ ಸೇವೆಯು ಕೃಷ್ಣನಿಗೆ ಅಪಿ೯ತವಾಗುತ್ತದೆ. ತದನಂತರ ಕೃಷ್ಣನ ಉತ್ಸವ ಮೂರ್ತಿಯನ್ನು ಸ್ವಣ೯ಪಾಲಕಿಯಲ್ಲಿರಿಸಿ ವಾದ್ಯವೃಂದದವರಿಂದ ವೇಣುನಾದ ಪ್ರಿಯ ಶ್ರೀಕೃಷ್ಣನಿಗೆ ಕೊಳಲುಸೇವೆಯು ಜರುಗುತ್ತದೆ. ಕೊಳಲದ್ವನಿಯಿಂದ ಗೋಪ ಗೋಪಿಕೆಯರನ್ನು ಪಶುಪಕ್ಷಿಗಳನ್ನು ಮಂತ್ರ ಮುಗ್ದರನ್ನಾಗಿಸಿದ ಕೃಷ್ಣನಿಗೆ ಕೊಳಲು ಸೇವೆಯು ಅರ್ಪಣೆಯಾದ ನಂತರ ಕೃಷ್ಣನ ಉತ್ಸವ ಮೂತಿ೯ಯನ್ನು ಗಭ೯ಗೃಹದಲ್ಲಿರಿಸಿ ಪೂಜೆ ಸಲ್ಲಿಸಲಾಗುವುದು.
ಗರ್ಭಗೃಹದ ಪಕ್ಕದ ಕೋಣೆಯಲ್ಲಿರುವ ಚಿನ್ನದ ಪುಟ್ಟತೊಟ್ಟಿಲಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಇರಿಸುವರು.ಕೃಷ್ಣನ ಶಯನೋತ್ಸವಕ್ಕೆ ಸಿದ್ಧತೆಗಳು ಸಾಗುತ್ತದೆ. ಹತ್ತಿಯ ದಿಂಬು ಹಾಗೂ ಹಾಸಿಗೆಯನ್ನು ತೊಟ್ಟಿಲಲ್ಲಿ ಹಾಸಿ ಇಬ್ಬದಿಗಳಲ್ಲಿ ಮುತ್ತಿನಂತೇ ಹೊಳೆಯುವ ತುಪ್ಪದ ದೀಪಗಳನ್ನು ಬೆಳಗಿಸಲಾಗುವುದು.ತದನಂತರ ಶ್ರೀಕೃಷ್ಣನ ಪ್ರತಿಮೆಯನ್ನು ಶಯನ ಭಂಗಿಯಲ್ಲಿರಿಸಿ ಪೀತಾಂಬರವನ್ನು ಹೊದೆಸುವರು.
ಆಮೇಲೆ ಕೃಷ್ಣನಿಗೆ ಹೂವನಿರಿಸಿ ಪರಿಮಳ ಸುಗಂಧ ದ್ರವ್ಯಗಳನ್ನು ಚಿಮುಕಿಸಿ ಲಡ್ಡು ಹಾಲು ಕಷಾಯ ಸಿಹಿಯನ್ನು
ನಿವೇದಿಸಲಾಗುವುದು. ಮೆಲ್ಲನೆ ತೊಟ್ಟಿಲು ತೂಗುತ್ತಾ ಭಕ್ತಿ ಭಾವದಿಂದ ಇಂಪಾಗಿ ಜೋಗುಳ ಹಾಡುತ್ತಾ ದಿನದ ಪೂಜೆಯನ್ನು ಪೊರೈಸುವರು. ಯಶೋದಾ ಮಾತೆಯ ಕೃಷ್ಣಪ್ರೇಮವನ್ನು ನೆನಪಿಸುವ ಈ ಕ್ಷಣದಲ್ಲಿ ನೆರೆದಿರುವ ಸಮಸ್ತ ಭಕ್ತರು ಭಾವಪರವಶರಾಗುವರು.
ಪೂಜಾ ನಂತರ ಯತಿಗಳು ವಿದ್ವಾಂಸರು ಹಾಗೂ
ಭಕ್ತವೃಂದದವರೆಲ್ಲಾ ಶ್ರೀ ವಾದಿರಾಜ ವಿರಚಿತ ಲಕ್ಷ್ಮೀ ಶೋಭಾನೆ ಹಾಡಿನ ಕೊನೆಯ ಚರಣವನ್ನು ಹಾಡುತ್ತಿದ್ದಂತೆ ಮೂರು ಭಾರಿ ಶಂಖನಾದವು ಮೊಳಗುವುದು.
ಸಂಗೀತಪ್ರಿಯ ಕೃಷ್ಣನ ಪೂಜೆಯು ಸಂಗೀತದೊಂದಿಗೆ ಆರಂಭವಾಗಿ ದಿನದ ಕೊನೆಯಲ್ಲಿ ಜೋಗುಳದ ಹಾಡಿನೊಂದಿಗೆ ಸಮಾಪನಗೊಳ್ಳುವುದು.
ಇಷ್ಟೇ ಅಲ್ಲದೇ ಪರ್ವಕಾಲ ಹಾಗೂ ಹಬ್ಬ ಹರಿದಿನಗಳಲ್ಲಿ ಶ್ರೀಕೃಷ್ಣನನ್ನು ವೈವಿಧ್ಯಮಯ ಸಂಗೀತ ಸೇವೆಗಳಿಂದ ಆರಾಧಿಸುವ ಸಂಪ್ರದಾಯವೂ ಇಲ್ಲಿ ನೂರಾರು ವರ್ಷಗಳಿಂದ ಜರಗುತ್ತಿದೆ.
ಜಾಗರಸೇವೆ:
ಚಾತುರ್ಮಾಸ್ಯ ಕಾಲದಲ್ಲಿ ಪ್ರತೀ ಏಕಾದಶಿಯಂದು ರಾತ್ರಿಯ ಎಲ್ಲಾ ಪೂಜೆಗಳು ಮುಗಿದ ನಂತರ ಜಾಗರಣಾ ಸೇವೆಯು ಆರಂಭವಾಗುತ್ತದೆ. ಪರ್ಯಾಯ ಮಠದ ಯತಿಗಳು ಉಳಿದ ಮಠದ ಯತಿಗಳ ಜೊತೆ ಸೇರಿ ಶ್ರೀಕೃಷ್ಣ ಪ್ರತಿಮೆಯ ಮುಂಭಾಗದ ತೀರ್ಥಮಂಟಪದ ಬಳಿ ಶಿರದ ಮೇಲೆ ಹರಿವಾಣದಲ್ಲಿ ಶ್ರೀಕೃಷ್ಣನಿಗೆ ಅರ್ಪಿಸಿದ ತುಳಸಿಯನ್ನು ಇರಿಸಿಕೊಂಡು”ಡಂಗುರವ ಸಾರಿರಯ್ಯ ಡಿಂಗರಿಗರೆಲ್ಲರೂ”ಎಂಬ ಹಾಡನ್ನು ಸ್ವತಃ ಹಾಡುತ್ತಾ ತಾಳಬದ್ದವಾಗಿ ಹೆಜ್ಜೆ ಹಾಕುತ್ತಾ ಪ್ರದಕ್ಷಿಣೆ ಹಾಕುತ್ತಾರೆ.ಈ ಸಂಗೀತ ಸೇವೆಯು ಇಂದಿಗೂ ಕೃಷ್ಣ ಮಠದಲ್ಲಿ ಚಾತುರ್ಮಾಸ್ಯದ ಏಕಾದಶಿಯಂದು ಸಲ್ಲುತ್ತಿದೆ. ಶ್ರೀಪಾದರ ಜೊತೆಗೆ ಭಕ್ತವೃಂದದವರೂ ಕೂಡಾ ಈ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ.
ಪಕ್ಷಿಜಾಗರಣಾ ಪೂಜಾ:
ಧನುರ್ಮಾಸದ ಪ್ರಾತಃಕಾಲದಲ್ಲಿ ಪಕ್ಷಿಜಾಗರಣಾ ಪೂಜೆಗೂ ಮುಂಚಿತವಾಗಿ ಶ್ರೀಮಠದ ಚಂದ್ರಶಾಲೆಯಲ್ಲಿ ಸುಮಾರು 8 ಬಗೆಯ ಸಾಂಪ್ರದಾಯಿಕ ವಾದ್ಯಗಳ ಸೇವೆ ಒಂದು ತಿಂಗಳುಗಳ ಕಾಲ ನಿರಂತರವಾಗಿ ಜರಗುತ್ತದೆ.
ಈ ಸಂದರ್ಭದಲ್ಲಿ ಪ್ರಸ್ತುತ ಪಡಿಸುವ ಸೂರ್ಯ ವಾದ್ಯ,ದಿಡುಂಬು,ಉಡ್ಕು ವಾದ್ಯಗಳು ಪ್ರಾಚೀನ ವಾದ್ಯಗಳೆಂದೆನಿಸಿದೆ.
ಇತ್ತೀಚಿನ ದಿನಗಳಲ್ಲಿ ಈ ತೆರನಾದ ವಾದ್ಯಗಳ ಸೇವೆ ತೀರಾ ಅಪರೂಪ.
ಹೋಳಿ: ಹೋಳಿ ಹುಣ್ಣಿಮೆಯಂದು ಉಡುಪಿ ಸಮೀಪದ ಕೆಲ ಗ್ರಾಮೀಣ ಪ್ರದೇಶಗಳ ಭಕ್ತ ಸಮುದಾಯ ಬಣ್ಣಬಣ್ಣದ ವೇಷ ಧರಿಸಿ ಶಿರದಲ್ಲಿ ಹಿಂಗಾರದ ಹೂವು ಮುಡಿದುಕೊಂಡು ಶಂಖ,ತಾಳ,ತಮಟೆ, ಘಂಟೆಯೊಂದಿಗೆ ಶ್ರೀಕೃಷ್ಣನ ರಾತ್ರಿಯ ರಥೋತ್ಸವದ ಕಾಲದಲ್ಲಿ ಶ್ರೀಕೃಷ್ಣನನ್ನು ಕೊಂಡಾಡುವ ಜಾನಪದ ಹಾಡುಗಳನ್ನು ಹಾಡುತ್ತಾ ಆಕರ್ಷಕವಾಗಿ ನರ್ತಿಸುವ ಪದ್ಧತಿ ಈ ಹಿಂದೆ ರೂಡಿಯಲ್ಲಿತ್ತು.ಆದರೆ ಇತ್ತೀಚಿನ ವರ್ಷಗಳಲ್ಲಿ ರಥೋತ್ಸವದ ಸಂದರ್ಭದಲ್ಲಿ ಇವರ ಉಪಸ್ಥಿತಿ ವಿರಳವಾಗುತ್ತಿದೆ.
ತುಳಸೀ ಸಂಕೀರ್ತನೆ:
ಸಂಕೀರ್ತನೆಯ ಮಾಸವೆಂದೇ ಕರೆಯಲ್ಪಡುವ ಕಾರ್ತಿಕ ಮಾಸದಲ್ಲಿ 15 ದಿನಗಳ ಕಾಲ ರಾತ್ರಿಯ ತುಳಸೀ ಪೂಜೆಯ ನಂತರ ತಾಳ ಹಾಗೂ ಡೋಳಕಿಯೊಂದಿಗೆ ಭಕ್ತ ಸಮುದಾಯ ಸುಮಾರು ಒಂದು ಗಂಟೆಗಳ ಕಾಲ ಹಾಡು ಮತ್ತು ನರ್ತನದೊಂದಿಗೆ ಶ್ರೀಕೃಷ್ಣನಗುಡಿಗೆ ಮತ್ತು ತುಳಸೀಕಟ್ಟೆಗೆ ಪ್ರದಕ್ಷಿಣೆಯನ್ನು ಸಲ್ಲಿಸುತ್ತಾ ವಿಶಿಷ್ಟ ಮಾದರಿಯಲ್ಲಿ ಸಂಕೀರ್ತನೆಯ ಸೇವೆಯನ್ನು ಅರ್ಪಿಸುತ್ತಾರೆ.ಈ ಸಂಕೀರ್ತನೆಗಳ ವೀಕ್ಷಣೆಗಾಗಿ ನಾಡಿನೆಲ್ಲೆಡೆಯಿಂದ ಸಾವಿರಾರು ಭಕ್ತರು ಸನ್ನಿಧಾನಕ್ಕೆ ಆಗಮಿಸುತ್ತಾರೆ.ಶ್ರೀ ವಾದಿರಾಜರ,ದಾಸವರೆಣ್ಯರ ಹಾಗೂ ಇತರ ಅನೇಕ ಯತಿಗಳು ರಚಿಸಿದ ಕೃತಿಗಳನ್ನು ಈ ಸಂಕೀರ್ತನಾ ಕಾಲದಲ್ಲಿ ಹಾಡಲಾಗುವುದು.
ಸಕಲ ವಿದ್ಯೆಗಳಿಗೆ ಜನಕನಾಗಿದ್ದರೂ ಕೂಡಾ ಜಗದ ಯುಗದ ನಿಯಮಾನುಸಾರ ಪ್ರಸಿದ್ದ ಕಲಾವಿದನಾಗಿ,
ಶ್ರೋತೃವಾಗಿ, ಕಲಾಪ್ರೇಮಿಯಾಗಿ, ಬಹುರೂಪದಲಿ ಬಂದು ನಿಷ್ಕಲ್ಮಶ ಹೃದಯದ ಭಕ್ತರ ಕಲಾರಾಧನೆಯಲ್ಲಿ ಮಿಂದು ಅವರನ್ನೆಲ್ಲಾ ಅನವರತ ಸಲಹುತ್ತಿರುವ ಗಾನಲೋಲ ಶ್ರೀಕೃಷ್ಣನ ಲೀಲೆಯನು ಎಷ್ಟು ಪೊಗಳಿದರೂ ಸಾಲದು.
ಏನೇಇರಲಿ ಭಗವಂತನ ಪಾದದ ಒಲುಮೆಗೆ ಪಾತ್ರವಾಗಲು ಸಂಗೀತ ಸೇವೆಯೂ ಕೂಡಾ ಒಂದು ಸಾಧನ ಎಂಬ ಸತ್ಯವನ್ನು ಶ್ರೀಕೃಷ್ಣನು ಕಲಿಯುಗದಲ್ಲಿ ನಿರೂಪಿಸಿದ ಬಗೆ ಬಹುಶಃ ಇದೇ ಇರಬೇಕು.. ಎಷ್ಟಾದರೂ ಶ್ರೀಕೃಷ್ಣನು ಸಂಗೀತ ಪ್ರಿಯನಲ್ಲವೇ.