ಉಡುಪಿ: ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಬೇಕಾದರೆ ಸಂಸ್ಕೃತ ಭಾಷೆಯ ಅಧ್ಯಯನ ಅತ್ಯವಶ್ಯಕ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿ ಸಂಸ್ಕೃತ ಕಾಲೇಜಿನ ನವೀಕೃತ ಕಟ್ಟಡವನ್ನು ಗುರುವಾರ ಉದ್ಘಾಟಿಸಿ, ಬಳಿಕ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಕೃತಿ ಇದ್ದರೆ ಸಾಕು, ಸಂಸ್ಕೃತ ಭಾಷೆಯ ಅವಶ್ಯಕತೆ ಇಲ್ಲವೆಂದು ಕೆಲವರು ವಾದಿಸುತ್ತಾರೆ. ಆದರೆ ಇದು ಹಾಲು ಬೇಕು. ನಮಗೆ ಲೋಟ ಬೇಡ ಎಂಬಂತಿದೆ. ಆದ್ದರಿಂದ ಲೋಟ ಇಲ್ಲದೆ ಹೇಗೆ ಹಾಲು ಕೊಡಲು ಸಾಧ್ಯವಿಲ್ಲವೋ, ಅದೇ ರೀತಿ ಸಂಸ್ಕೃತ ಇಲ್ಲದೆ ಸಂಸ್ಕೃತಿ ಉಳಿಸಲು ಸಾಧ್ಯವಿಲ್ಲ. ಸಂಸ್ಕೃತಿ ನಮ್ಮ ಚೈತನ್ಯ, ಸಂಸ್ಕೃತ ನಮ್ಮ ಶರೀರ ಇದ್ದಂತೆ. ಇದೆರಡನ್ನು ಉಳಿಸಿಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದ, ಉಪನಿಷತ್ತುಗಳು ಕೂಡ ಸಂಸ್ಕೃತದ ಆಕಾರಗಳು. ನಮ್ಮ ನೆಲದ ಸಂಸ್ಕೃತಿಯನ್ನು ಅರಿಯಬೇಕಾದರೆ ಸಂಸ್ಕೃತ ಭಾಷೆಯ ಅಧ್ಯಯನ ಅವಶ್ಯಕ. ಕೃಷ್ಣಮಠ ಹಾಗೂ ಸಂಸ್ಕೃತ ಪಾಠಶಾಲೆ ಅಷ್ಟಮಠಗಳ ಸಂಪತ್ತು. ಅದನ್ನು ಉಳಿಸಿಬೆಳೆಸುವುದು ಅಷ್ಟಮಠಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ಆಡಳಿತದಲ್ಲಿರುವ ಸರ್ಕಾರವೇ ಸಂಸ್ಕೃತ ಭಾಷೆಗೆ ಎಲ್ಲ ರೀತಿಯ ಸಹಕಾರ ಕೊಡಲು ಮುಂದಾಗಿದೆ. ಇದು ಸಂಸ್ಕೃತ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹೃದಯದ ಶ್ರೀಮಂತಿಕೆ ಉಳ್ಳವರು ಸಿಕ್ಕಿದರೆ, ಯಾವುದೇ ಸಂಸ್ಥೆಯನ್ನಾದರೂ ಕಟ್ಟಬಹುದು ಎಂಬುವುದಕ್ಕೆ ಸಂಸ್ಕೃತ ಕಾಲೇಜಿನ ನವೀಕೃತ ಕಟ್ಟಡವೇ ಸಾಕ್ಷಿ ಎಂದರು.
ಸಂಸ್ಕೃತದ ಅಪಮಾನ ಸಲ್ಲದು:
ಸಂಸ್ಕೃತಿಯ ಮೂಲ ಬೇರು ಸಂಸ್ಕೃತ. ಇಂದು ಯುವತಿಯರು ಸಂಸ್ಕೃತ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಅವರು ಗೌರವದಿಂದ ಕಲಿತರೆ ಯಾವುದೇ ಸಮಸ್ಯೆ ಇಲ್ಲ. ಕೆಲವರು ಯೂಟೂಬ್ಗಳಲ್ಲಿ ಸಂಸ್ಕೃತ ಶ್ಲೋಕಗಳನ್ನು ಕಂಠಪಾಠ ಮಾಡಿ, ಅದನ್ನು ತಿರುಚುವ ಮೂಲಕ ನಮ್ಮ ಸಂಸ್ಕೃತಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ಅತ್ಯಂತ ಖೇದಕರವಾದುದು. ಇಂತಹ ಘಟನೆಗಳನ್ನು ತಡೆದು, ಸರಿಪಡಿಸಬೇಕಾದರೆ ನಾವು ಸಂಸ್ಕೃತವನ್ನು ಕಲಿಯಬೇಕು ಎಂದು ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು.
ಪಲಿಮಾರು ಕಿರಿಯ ವಿದ್ಯಾರಾಜೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಶಾಸಕ ಕೆ. ರಘುಪತಿ ಭಟ್, ಕುಲಸಚಿವ ಡಾ. ವೀರನಾರಾಯಣ ಪಾಂಡುರಂಗ, ಉದ್ಯಮಿಗಳಾದ ರಾಮದಾಸ್ ಮಡಮಣ್ಣಾಯ, ಬಿ. ಲಕ್ಷ್ಮೀಕಾಂತನ್, ಕರ್ನಾಟಕ ಬ್ಯಾಂಕ್ನ ಆಡಳಿತ ನಿರ್ದೇಶಕ ಎಂ.ಎಸ್. ಮಹಾಬಲೇಶ್ವರ, ಬೆಂಗಳೂರಿನ ಕೂಟ ಮಹಾಜಗತ್ತು ಅಧ್ಯಕ್ಷ ಶ್ರೀಧರ ಮಯ್ಯ, ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಶ್ಯಾಮ್ ಭಟ್, ಉದ್ಯಮಿ ವಾಸುದೇವ ಭಟ್,
ವಿದ್ವಾಂಸ ಪದ್ಮನಾಭ ಶರ್ಮಾ, ಮಂಜುನಾಥ ಭಟ್, ರತ್ನಕುಮಾರ್, ಕೆ. ಪದ್ಮನಾಭ ಭಟ್, ವೇದವ್ಯಾಸ ತಂತ್ರಿ ಉಪಸ್ಥಿತರಿದ್ದರು.
ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀನಾರಾಯಣ ಭಟ್ ಸ್ವಾಗತಿಸಿ, ಪ್ರಾಧ್ಯಾಪಕ ಡಾ. ಶಿವಪ್ರಸಾದ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಕೃತ ವಿವಿ ನಿರ್ಮಾಣಕ್ಕೆ 369 ಕೋಟಿ ಪ್ರಸ್ತಾವ ಸಲ್ಲಿಕೆ:
ಬೆಂಗಳೂರಿನ ತಿಪ್ಪಸಂದ್ರ ಸಮೀಪದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಲು ನೂರು ಎಕರೆ ಜಾಗ ಗುರುತಿಸಲಾಗಿದೆ. ಕಟ್ಟಡ ನಿರ್ಮಾಣ 369 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಪಮುಖ್ಯಮಂತ್ರಿ ಡಾ. ಅಶ್ವಥ್ನಾರಾಯಣ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಸಂಸ್ಕೃತ
ವಿಶ್ವವಿದ್ಯಾಲಯದ ಕುಲಪತಿ ಡಾ. ಗಿರೀಶಚಂದ್ರ ಹೇಳಿದರು.

















