ಉಡುಪಿ:ಸಾಲಿಗ್ರಾಮ ಪ.ಪಂ. ಉದ್ಯಮ ಪರವಾನಿಗೆ ನವೀಕರಣ: ಅರ್ಜಿ ಆಹ್ವಾನ

ಉಡುಪಿ:ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಎಲ್ಲಾ ಉದ್ಯಮದಾರರ 2026-27 ನೇ ಸಾಲಿನ ಉದ್ಯಮ
ಪರವಾನಿಗೆ ನವೀಕರಣ ಅವಧಿಯು ಏಪ್ರಿಲ್ 2026 ರಿಂದ ಪ್ರಾರಂಭವಾಗಲಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯಮ ನಡೆಸುತ್ತಿರುವ ಉದ್ಯಮದಾರರು ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ನಿಗದಿತ ದಾಖಲೆ ಸಹಿತ
ಆನ್‌ಲೈನ್ ಮೂಲಕ ಅಥವಾ ಪಟ್ಟಣ ಪಂಚಾಯತ್‌ಗೆ ಅರ್ಜಿ ನಮೂನೆ ಹಾಗೂ ದಾಖಲೆ ಸಹಿತ ಶುಲ್ಕ ಪಾವತಿಸಿ ಉದ್ಯಮ
ಪರವಾನಿಗೆ ನವೀಕರಿಸಿಕೊಳ್ಳಬಹುದಾಗಿದೆ.

ನಿಗದಿತ ಅವಧಿಯಲ್ಲಿ ಉದ್ಯಮ ಪರವಾನಿಗೆ ನವೀಕರಿಸದಿದ್ದಲ್ಲಿ ಅಧಿಸೂಚನೆಯಂತೆ ದಂಡ ಸಹಿತ ಬಾಕಿ ಶುಲ್ಕವನ್ನು
ಪಾವತಿಸಬೇಕು. ಈಗಾಗಲೇ ಉದ್ಯಮ ಸ್ಥಗಿತಗೊಳಿಸಿದ್ದಲ್ಲಿ ಮಾರ್ಚ್ ಅಂತ್ಯದೊಳಗೆ ಪಟ್ಟಣ ಪಂಚಾಯತ್‌ಗೆ ಲಿಖಿತವಾಗಿ ಅರ್ಜಿ
ಸಲ್ಲಿಸಿ, ದಂಡ ಸಹಿತ ಬಾಕಿ ಶುಲ್ಕ ಪಾವತಿಸಿ ಉದ್ಯಮ ಪರವಾನಿಗೆಯನ್ನು ರದ್ದುಪಡಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ಸದ್ರಿ
ಉದ್ಯಮದಾರರನ್ನು ಪ್ರತಿವರ್ಷ ಬಾಕಿದಾರರೆಂದು ಪರಿಗಣಿಸಿ ಕಾನೂನು ರೀತ್ಯಾ ದಂಡಸಹಿತ ಬಾಕಿ ಶುಲ್ಕ ವಸೂಲಿ ಮಾಡಲು
ಕ್ರಮವಹಿಸಲಾಗುವುದು.

ಉದ್ಯಮ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಉದ್ಯಮ ನಡೆಸುತ್ತಿದ್ದಲ್ಲಿ ತಕ್ಷಣವೇ ನಿಗದಿತ ದಾಖಲೆ ಸಹಿತ ಆನ್‌ಲೈನ್
ತಂತ್ರಾಂಶದ ಮೂಲಕ ಅಥವಾ ಪಟ್ಟಣ ಪಂಚಾಯತ್ ಕಛೇರಿಗೆ ಆನ್‌ಲೈನ್ ಮೂಲಕ ಅಥವಾ ಲಿಖಿತವಾಗಿ ಅರ್ಜಿ ಸಲ್ಲಿಸಿ ದಾಖಲೆ
ನೀಡಿ ಉದ್ಯಮ ಪರವಾನಿಗೆಯನ್ನು ಪಡೆದುಕೊಳ್ಳಬೇಕು.

ಬೀದಿ ಬದಿ ವ್ಯಾಪಾರಸ್ಥರು, ಗೂಡಂಗಡಿದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿ ವ್ಯಾಪಾರಸ್ಥರು ಉದ್ಯಮ ಪರವಾನಿಗೆ ಪಡೆಯದೇ ಉದ್ಯಮ ನಡೆಸುತ್ತಿದ್ದಲ್ಲಿ ಪಟ್ಟಣ ಪಂಚಾಯತ್ ಕಛೇರಿಗೆ ಘನತ್ಯಾಜ್ಯ ಹಾಗೂ ಉದ್ಯಮ ಶುಲ್ಕವನ್ನು ಪಾವತಿಸಬೇಕು. ತಂಬಾಕು ಉತ್ಪನ್ನಗಳ ಮಾರಾಟಗಾರರು ನಿಗದಿತ ಶುಲ್ಕ ಪಾವತಿಸಿಕೊಂಡು ಕಡ್ಡಾಯವಾಗಿ ಆನ್‌ಲೈನ್ ತಂತ್ರಾಂಶದ ಮೂಲಕ ತಂಬಾಕು/ಗುಟ್ಕಾ ಪರವಾನಿಗೆ ಪಡೆಯುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.