ಉಡುಪಿ: ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಇದೇ ಮೇ 10ರಿಂದ ದಿನಸಿ, ಹಣ್ಣು , ತರಕಾರಿ, ಮಾಂಸ, ಮೀನು, ಪ್ರಾಣಿಗಳ ಮೇವುಗಳ ಮಾರಾಟಕ್ಕೆ ಬೆಳಿಗ್ಗೆ 6ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅವುಗಳ ಖರೀದಿಸಲು ವಾಹನ ಬಳಕೆಯನ್ನು ನಿಷೇಧಿಸಲಾಗಿದೆ. ಮನೆ ಸಮೀಪದ ಅಂಗಡಿಗಳಿಂದಲೇ ವಸ್ತುಗಳನ್ನು ಖರೀದಿಸಬೇಕು. ಅದು ಬಿಟ್ಟು ಉಳಿದ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಹೊಟೇಲ್‌ಗಳಲ್ಲಿ ಬೆಳಿಗ್ಗೆ 6ಗಂಟೆಯಿಂದ ರಾತ್ರಿ 9ಗಂಟೆವರೆಗೆ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ಪಾರ್ಸೆಲ್, ಅಗತ್ಯ ವಸ್ತುಗಳ ಖರೀದಿಗೆ ತೆರಳಲು ಸಾರ್ವಜನಿಕರು ಯಾವುದೇ ವಾಹನ ಬಳಸುವಂತಿಲ್ಲ. ತಮ್ಮ ಮನೆ ಸಮೀಪದ ಅಂಗಡಿಗಳಿಗೆ ನಡೆದುಕೊಂಡು ಹೋಗಿಯೇ ವಸ್ತುಗಳನ್ನು ಖರೀದಿಸಬೇಕು. ಇದನ್ನು ಉಲ್ಲಂಘಿಸಿದರೆ ವಾಹನ ಮುಟ್ಟುಗೋಲು ಹಾಕುವುದಲ್ಲದೆ ಎಪಿಡಮಿಕ್ ಕಾಯಿದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.
ಮದ್ಯದಂಗಡಿಗಳಿಗೆ ಬೆಳಗ್ಗೆ 6ರಿಂದ 10ಗಂಟೆಯವರೆಗೆ ಪಾರ್ಸೆಲ್‌ಗೆ ಅವಕಾಶ ಮಾಡಿಕೊಡಲಾಗಿದೆ. ಹಾಪ್‌ಕಾಮ್ಸ್ ಮತ್ತು ಕೆಎಂಎಫ್ ಮಿಲ್ಕ್ ಬೂತ್‌ಗಳನ್ನು ತೆರೆಯಲು ಮತ್ತು ತಳ್ಳು ಗಾಡಿಗಳಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಬೆಳಿಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಅದು ಬಿಟ್ಟು ಹೊಟೇಲು, ಬೇಕರಿಗಳಲ್ಲಿ ಹಾಲು ಮಾರಾಟಕ್ಕೆ ಅವಕಾಶ ಇಲ್ಲ. ಹೋಮ್ ಡೆಲಿವರಿಗೆ 24ಗಂಟೆಗಳ ಕಾಲವೂ ವಾಹನ ದೊಂದಿಗೆ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬ್ಯಾಂಕ್, ಎಂಟಿಎಂ, ವಿಮಾ ಕಂಪೆನಿಗಳು ತೆರೆದಿರುತ್ತದೆ ಎಂದರು.
ರೈಲ್ವೆ ಮತ್ತು ವಿಮಾನ ಯಾನ ಮಾಡುವವರು ಟಿಕೆಟ್ ನೊಂದಿಗೆ ಸಂಚಾರ ಮಾಡಬಹುದು. ತುರ್ತು ಆರೋಗ್ಯ ಕಾರಣಕ್ಕಾಗಿ ಟ್ಯಾಕ್ಸಿ ಮತ್ತು ಆಟೋ ರಿಕ್ಷಾ ಓಡಾಟಕ್ಕೆ ಅವಕಾಶ ಮಾಡಲಾಗಿದೆ. ರೋಗಿ ಮತ್ತು ಅವರ ಪರಿಚಾರಕರಿಗೆ ದಾಖಲೆಯೊಂದಿಗೆ ಓಡಾಟ ಮಾಡಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.
ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ, ಆರೋಗ್ಯ ಕಾರ್ಯಗಳಿಗಾಗಿ ಆರೋಗ್ಯ ಸಿಬ್ಬಂದಿಗೆ, ಕೋರ್ಟ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲು ಅಂತರ್ ರಾಜ್ಯ ಮತ್ತು ಜಿಲ್ಲಾ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಕೈಗಾರಿಕೆ ಅಗತ್ಯ ವಸ್ತುಗಳ ತಯಾರಿಕಾ ಘಟಕಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಕಂಟೈನ್‌ಮೆಂಟ್ ವಲಯದ ಹೊರಗೆ ಸೈಟ್‌ನಲ್ಲಿರುವ ಕಟ್ಟಡ ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಯಾವುದೇ ಕಾರಣಕ್ಕೂ ಕಾರ್ಮಿಕರನ್ನು ಹೊರಗಡೆ ಯಿಂದ ಕರೆದುಕೊಂಡು ಬರಲು ಅವಕಾಶ ಇಲ್ಲ. ಹಾರ್ಡ್‌ವೇರ್ ಅಂಗಡಿ ತೆರೆಯಲು ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೆಲಸ ಇಲ್ಲದಿದ್ದರೆ ಕಾರ್ಮಿಕರನ್ನು ಬೀದಿಯಲ್ಲಿ ಬಿಡುವ ಕಾರ್ಮಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಕೆಲಸ ಮಾಡಿಸಲು ಆಗದಿದ್ದರೆ ನಾಳೆ ಸಂಜೆಯೊಳಗೆ ಕಾರ್ಮಿಕರನ್ನು ಅವರ ಮನೆಗಳಿಗೆ ಕಳುಹಿಸಿಕೊಡಬೇಕು ಎಂದು ಅವರು ಸೂಚನೆ ನೀಡಿದರು.
ಮೀನುಗಾರಿಕೆ ಚಟುವಟಿಕೆಗೆ ಅವಕಾಶ ಇಲ್ಲ. ಬಂದರಿನಲ್ಲಿ ಸಾರ್ವಜನಿಕರು ಮೀನು ಖರೀದಿಸುವುದನ್ನು ನಿರ್ಬಂಧಿಸಲಾಗಿದೆ. ಮದುವೆಯಲ್ಲಿ 40 ಮಂದಿ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಅಂತರ್ ಜಿಲ್ಲಾ ಮದುವೆ ಯಾದರೆ ತಹಶೀಲ್ದಾರ್ ಅದಕ್ಕೆ ಅನುಮತಿ ಮತ್ತು ಪಾಸ್ ನೀಡಲಿದ್ದಾರೆ. ಅದು ಬಿಟ್ಟು ಮೆಹಂದಿಗೆ ಅವಕಾಶ ಇಲ್ಲ. ಅಂತ್ಯಕ್ರಿಯೆಗೆ ಐದು ಮಂದಿಗೆ ಮಾತ್ರ ಅವಕಾಶ ಒದಗಿಸಲಾಗಿದೆ ಎಂದು ಅವರು ಹೇಳಿದರು.
ವಿನಾಯಿತಿ ನೀಡಲು ಮನವಿ:
ಹೊಸ ಮಾರ್ಗಸೂಚಿಯಲ್ಲಿ ನಡೆದುಕೊಂಡೇ ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸುವಂತೆ ಸರಕಾರ ಸೂಚನೆ ನೀಡಿದೆ. ಆದರೆ ಕರಾವಳಿ ಜಿಲ್ಲೆಯಲ್ಲಿ ಅದು ಪಾಲಿಸಲು ಸಾಧ್ಯವಾಗದ ಕಾರಣ ಈ ವಿಚಾರವನ್ನು ಸರಕಾರದ ಗಮನಕ್ಕೆ ತರಲಾಗುವುದು. ಸರಕಾರ ಗ್ರಾಮೀಣ ಪ್ರದೇಶ ದಲ್ಲಿ ದೂರ ಇರುವ ಅಂಗಡಿಗಳಿಗೆ ವಾಹನಗಳಲ್ಲಿ ತೆರಳಲು ಸೂಚಿಸಿದರೆ ನಾವು ಅವಕಾಶ ಮಾಡಿ ಕೊಡುತ್ತೇವೆ ಎಂದು ಡಿಸಿ ತಿಳಿಸಿದರು.