ಉಡುಪಿ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ 

ಉಡುಪಿ: ಪಬ್ಲಿಕ್‌ ಸ್ಕೂಲ್‌ ಬದಲಾಗಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಬೇಕು ಹಾಗೂ ಸೇವಾ ಜೇಷ್ಠತೆ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು ಹಾಗೂ‌ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಉಡುಪಿ ಜಿಲ್ಲಾ ಸಮಿತಿಯ
ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆರು ಹಾಗೂ ಸಹಾಯಕಿಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ರಾಜ್ಯದಲ್ಲಿ 62,580 ಅಂಗನವಾಡಿ ಕೇಂದ್ರಗಳು ಹಾಗೂ 3331 ಮಿನಿ ಅಂಗನವಾಡಿ ಕೇಂದ್ರಗಳು 45 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಇಂದು ಅಂಗನವಾಡಿ  ಕೇಂದ್ರಗಳಲ್ಲಿ ಮೂರು ವರ್ಷದೊಳಗಿನ ಮಕ್ಕಳು 23,23,347, ಮೂರರಿಂದ ಆರು ವರ್ಷದೊಳಗಿನ 16,40,170 ಮಕ್ಕಳು, 8,95,465 ಗರ್ಭಿಣಿ ಮತ್ತು ಬಾಣಂತಿಯರನ್ನೊಳಗೊಂಡಂತೆ ಒಟ್ಟು 51.04 ಲಕ್ಷ ಫಲಾನುಭವಿಗಳಿದ್ದಾರೆ. ಹಾಗಾಗಿ ಅಂಗನವಾಡಿ ಮಾನವ ಸಂಪನ್ಮೂಲಗಳ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಯೋಜನೆಯನ್ನು ಸಬಲೀಕರಣಗೊಳಿಸುವ ಬದಲಿಗೆ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳಲ್ಲಿ ನಿರ್ವಹಿಸಬೇಕಾದ
ಜವಾಬ್ದಾರಿಯನ್ನು ಸರ್ಕಾರಿ ಶಾಲೆಗಳು ನಿರ್ವಹಿಸುವುದು ಸರಿಯಲ್ಲ. ಆದ್ದರಿಂದ ಯುಕೆಜಿ ಮತ್ತು ಎಲ್‌ಕೆಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಆರಂಭಿಸಬೇಕು ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ ಮಾತನಾಡಿ, ಜಿಲ್ಲೆಯ ೫೪ ಸರ್ಕಾರಿ ಪಬ್ಲಿಕ್‌ ಸ್ಕೂಲ್‌ಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಗೊಂಡಿದ್ದು, ಅಂಗನವಾಡಿಗೆ ಬರಬೇಕಿದ್ದ ಮಕ್ಕಳು ಪಬ್ಲಿಕ್‌ ಸ್ಕೂಲ್‌ಗೆ ಹೋಗುತ್ತಿದ್ದಾರೆ. ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಇದರಿಂದಾಗಿ ಕಳೆದ 40 ವರ್ಷಗಳಿಂದ ಐಸಿಡಿಎಸ್‌ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಬೀದಿಗೆ ಬರುವ ಆತಂಕ ಎದುರಾಗಿದೆ ಎಂದರು.
ಪ್ರತಿಭಟನೆ ಅನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಭಾರತಿ, ಕೋಶಾಧಿಕಾರಿ ಕೆ. ಯಶೋಧ, ಕುಂದಾಪುರ ತಾಲ್ಲೂಕು ಅಧ್ಯಕ್ಷೆ ಬಿ. ಆಶಾಲತಾ ಶೆಟ್ಟಿ, ಕೋಶಾಧಿಕಾರಿ ಭಾಗ್ಯ, ಪ್ರಧಾನ ಕಾರ್ಯದರ್ಶಿ ಶಾಂತಾ, ಬ್ರಹ್ಮಾವರ ತಾಲ್ಲೂಕು ಅಧ್ಯಕ್ಷೆ ಜಯಲಕ್ಷ್ಮೀ ಎಸ್‌. ಶೆಟ್ಟಿ, ಉಡುಪಿ ತಾಲ್ಲೂಕು ಸಮಿತಿ ಅಧ್ಯಕ್ಷೆ ಅಂಬಿಕಾ, ಕೋಶಾಧಿಕಾರಿ ಪ್ರಮೀಳಾ, ಸರೋಜಿನಿ ಮತ್ತಿತರರು ಭಾಗವಹಿಸಿದ್ದರು.