ಉಡುಪಿ: ರಾಜಾಂಗಣ ಪಾರ್ಕಿಂಗ್ ರಸ್ತೆಗೆ ತಡೆಗೊಡೆ ನಿರ್ಮಿಸಲು ಆಗ್ರಹ

ಉಡುಪಿ: ಕಲ್ಸಂಕ ರಾಷ್ಟ್ರೀಯ ಹೆದ್ದಾರಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವನ್ನು ಸಂಪರ್ಕಿಸುವ ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ. ರಸ್ತೆಯ ಎರಡು ಪಾರ್ಶ್ವಗಳಲ್ಲಿಯೂ ಇಂದ್ರಾಣಿ ತೀರ್ಥ ನದಿ ಹರಿಯುತ್ತಿದ್ದು, ಯಾವುದೇ ತಡೆಗೋಡೆ ಇಲ್ಲ. ಅತಿವೇಗದಲ್ಲಿ ಸಂಚರಿಸುವ ವಾಹನಗಳು ನಿಯಂತ್ರಣ ತಪ್ಪಿ ನದಿಗೆ ಬೀಳುವ ಸಾಧ್ಯತೆ ಹೆಚ್ಚು ಇದೆ. ಹಾಗಾಗಿ ಜಿಲ್ಲಾಡಳಿತ, ನಗರಸಭೆ ಕೂಡಲೇ ಎಚ್ಚೆತ್ತುಕೊಂಡು ರಸ್ತೆಯ ಎರಡು ಬದಿಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಆಗ್ರಹಿಸಿದೆ.


ಕಳೆದ ವರ್ಷ ಆಟೋ ಒಂದು ಇಂದ್ರಾಣಿ ನದಿಗೆ ಬಿದ್ದಿರುವ ಘಟನೆ ನಡೆದು ಹೋಗಿದೆ. ಹಾಗೆಯೇ ಮೊನ್ನೆಯಷ್ಟೇ ಬಾರ್ಕೂರು ಚೌಳಿಕೆರೆಗೆ ತಡೆಗೊಡೆ ಇಲ್ಲದೆ ಕಾರೊಂದು ಕೆರೆಗೆ ಬಿದ್ದು ವ್ಯಕ್ತಿಯೊರ್ವರು ಮೃತಪಟ್ಟು ಸಹ ಪ್ರಯಾಣಿಕಿ ಗಾಯಾಳಾಗಿರುವ ದುರಂತ ಘಟನೆ ನಡೆದಿದೆ.

ಹಾಗಾಗಿ ಜಿಲ್ಲಾಡಳಿತ, ನಗರಾಡಳಿತವು ಮುನ್ನೆಚ್ಚರಿಕೆಯ ಕ್ರಮವಾಗಿ ರಾಜಾಂಗಣ ಪಾರ್ಕಿಂಗ್ ರಸ್ತೆಯ ಎರಡೂ ಪಾರ್ಶ್ವಗಳಲ್ಲಿಯೂ ತಡೆಬೇಲಿ ಅಥವಾ ತಡೆಗೋಡೆಯನ್ನು ನಿರ್ಮಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು, ಸಹ ಸಂಚಾಲಕ ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.