ರಾತ್ರಿ 8ರಿಂದ 4ರ ವರೆಗೆ ರಾಷ್ಟ್ರೀಯ ವಿಶ್ರಾಂತಿ ಸಮಯವೆಂದು ಘೋಷಿಸಿ: ಕೊರೊನಾ‌ ಮಣಿಸಲು ಪುತ್ತಿಗೆ ಶ್ರೀ‌ ಸಲಹೆ

ಉಡುಪಿ: ಕೊರೊನಾ ಸೋಂಕನ್ನು ಸಂಪೂರ್ಣವಾಗಿ ತಡೆಗಟ್ಟಲು ಲಾಕ್ ಡೌನ್ ಅಂಥ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು. ಮನುಷ್ಯನ ಪ್ರತಿರೋಧ ಶಕ್ತಿ ಹೆಚ್ಚಿಸಲು ಪೂರಕವಾಗುವಂತೆ ರಾತ್ರಿ 8 ರಿಂದ ಬೆಳಗ್ಗೆ 4ರವರೆಗೆ ರಾಷ್ಟ್ರೀಯ ವಿಶ್ರಾಂತಿ ಸಮಯವೆಂದು ಘೋಷಿಸಬೇಕು ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕೇಂದ್ರ ಸರಕಾರವನ್ನು ಅಗ್ರಹಿಸಿದ್ದಾರೆ.

ಕೊರೊನಾ ಸೋಂಕಿನಿಂದ ದೇಶದ ಆರೋಗ್ಯ ರಕ್ಷಣೆಗಾಗಿ ಈ ವಿಶ್ರಾಂತಿ ಸಮಯದಲ್ಲಿ ಯಾವುದೇ ಟಿವಿ ಪ್ರಸಾರ, ಮನೋರಂಜನಾ ಕಾರ್ಯಕ್ರಮಗಳನ್ನೆಲ್ಲಾ ನಿರ್ಬಂಧಿಸಬೇಕು. ವಿಶ್ರಾಂತಿ ಸಮಯಕ್ಕೆ ತೊಂದರೆಯಾಗುವ ರಾತ್ರಿ ಪ್ರಯಾಣಗಳನ್ನು ನಿಷೇಧಿಸಬೇಕು ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ಒಂದು ಸಕಾಲ ನಿದ್ರಾ, ಸಕಾಲ ಆಹಾರ ಪದ್ಧತಿಯನ್ನು ಜನರು ತಪ್ಪದೇ ಪಾಲಿಸುವಂತೆ ಹಾಗೂ ಆಧುನಿಕ ಜೀವನ ಶೈಲಿಯನ್ನು ಬದಲಿಸುವಂತೆ ಮಾಡಲು ಪೂರಕ ಶಾಸನಾತ್ಮಕ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪುತ್ತಿಗೆ ಶ್ರೀಗಳು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮಠಕ್ಕೆ ಬಂದ ಬಳಿಕ ಈ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಕೊರೊನಾ ಬಂದಂತಹ ಸಂದರ್ಭದಲ್ಲಿ ನನಗೆ ಪ್ರತಿದಿನ ಮುಂಜಾನೆ 4 ಗಂಟೆಗೆ ಕೆಮ್ಮು ಶುರುವಾಗುತ್ತಿತ್ತು. ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿದಾಗ ರಾತ್ರಿ ವಿಳಂಬವಾಗಿ ನಿದ್ರಿಸುವು ದರಿಂದ ಕೆಮ್ಮು ಬರುತ್ತಿದೆ ಎಂದು ತಿಳಿಸಿದ್ದರು. ಅದಕ್ಕೆ ಪ್ರಯತ್ನ ಪಟ್ಟು ರಾತ್ರಿ 9 ಗಂಟೆಯೊಳಗೆ ಮಲಗಿದೆ. ಆಗ ಕೆಮ್ಮು ಪ್ರಮಾಣ ಕಡಿಮೆಯಾಯಿತು. ಇದರಿಂದ ನಾನು ಮನುಷ್ಯನ ಪ್ರತಿರೋಧ ಶಕ್ತಿಗೂ, ನಿದ್ರಾ ಸಮಯಕ್ಕೂ ನೇರ ಸಂಬಂಧವಿರುವುದನ್ನು ಅರ್ಥ ಮಾಡಿಕೊಂಡೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಸರಕಾರ, ಸಮಗ್ರ ಆರೋಗ್ಯ ವ್ಯವಸ್ಥೆಯನ್ನು ಪುನರ್ ನವೀಕರಿಸುವಂತಹ ಯೋಗ, ಪ್ರಾಣಾಯಾಮ, ಆಯುರ್ವೇದಗಳಿಗೆ ಹಾಗೂ ಸಕಾಲತೆಗೆ ವಿಶೇಷ ಮಹತ್ವ ಕೊಡಬೇಕು. ಈ ನಿಟ್ಟಿನಲ್ಲಿ ಪ್ರತಿರೋಧ ಶಕ್ತಿಯ ಪುನರುತ್ಥಾನಕ್ಕೆ ಪ್ರಮುಖ ಕಾರಣಗಳಾದ ಸಕಾಲ ಆಹಾರ ಹಾಗೂ ಸಕಾಲ ನಿದ್ರೆ ಸೂರ್ಯಾಸ್ತಕ್ಕಿಂತ ಮೊದಲು ಆಹಾರ ಸೇವನೆಯ ಮುಕ್ತಾಯ ಹಾಗೂ ರಾತ್ರಿ 8 ರಿಂದ ಬೆಳಗ್ಗೆ 4ರ ತನಕ ರಾಷ್ಟ್ರೀಯ ವಿಶ್ರಾಂತಿ ಸಮಯವೆಂದು ಘೋಷಿಸಬೇಕು ಎಂದು  ಸ್ವಾಮೀಜಿ ಒತ್ತಾಯಿಸಿದ್ದಾರೆ.