ರೈಲ್ವೆ ಖಾಸಗೀಕರಣ ವಿರೋಧಿಸಿ ಉಡುಪಿಯಲ್ಲಿ ನಡೀತು ಪ್ರತಿಭಟನೆ: ರೈಲ್ವೆ ಖಾಸಗೀಕರಣಕ್ಕೆ ವ್ಯಾಪಕ ವಿರೋಧ

ಉಡುಪಿ: ರೈಲ್ವೆ ಖಾಸಗೀಕರಣವನ್ನು ವಿರೋಧಿಸಿ ಸಿಐಟಿಯು ಉಡುಪಿ ತಾಲ್ಲೂಕು ಸಮಿತಿಯ ವತಿಯಿಂದ ಇಂದ್ರಾಳಿಯ ರೈಲ್ವೆ ನಿಲ್ದಾಣದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರವು ದೇಶದ ಸಾರ್ವಜನಿಕ ಸಂಪತ್ತುಗಳನ್ನು ಸದ್ದಿಲ್ಲದೆ ಖಾಸಗಿ ಕಂಪೆನಿಗಳಿಗೆ ಹಾಗೂ ವಿದೇಶಿ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ಕೆಲಸಕ್ಕೆ ಕೈಹಾಕಿದೆ. ಈಗಾಗಲೇ ಕಲ್ಲಿದ್ದಲು ಗಣಿ, ರಕ್ಷಣಾ ವಲಯ, ವಿದ್ಯುಚ್ಛಕ್ತಿ ನಿಗಮ, ಎಪಿಎಂಸಿ ಮಾರುಕಟ್ಟೆಗಳನ್ನು ಖಾಸಗೀಕರಣಗೊಳಿಸಿದ್ದಾರೆ. ಇದೀಗ ದೇಶದ ಅತೀ ದೊಡ್ಡ ಸಾರಿಗೆ ಸಂಪರ್ಕವಾದ ರೈಲ್ವೆಯನ್ನು ಖಾಸಗೀಕರಣಗೊಳಿಸಲು ಹೊರಟಿದೆ. ಅದರ ಭಾಗವಾಗಿ ದೇಶದ 109 ರೈಲ್ವೆ ನಿಲ್ದಾಣಗಳನ್ನು ಖಾಸಗಿಯವರಿಗೆ ಒಪ್ಪಿಸಿ, ಅವುಗಳ ಮೂಲಕ 151 ಖಾಸಗಿ ರೈಲುಗಳನ್ನು ಓಡಿಸಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರೈಲ್ವೆ ಖಾಸಗೀಕರಣದಿಂದ ಶ್ರಮಜೀವಿಗಳಿಗೆ ಮತ್ತು ಮಧ್ಯಮವರ್ಗದವರಿಗೆ ಈವರೆಗೆ ದೊರಕುತ್ತಿದ್ದ ರಿಯಾಯಿತಿ ಸೌಲಭ್ಯಗಳು ನಿಲ್ಲುವ ಸಾಧ್ಯತೆ ಇದೆ. ಸರಕು ಸಾಮಗ್ರಿಗಳ ಸಾಗಾಣಿಕೆ ವೆಚ್ಚವು ಏರಿಕೆಯಾಗಲಿದೆ. ಅಲ್ಲದೆ ದೇಶ ಕೃಷಿ ಮತ್ತು ಕೈಗಾರಿಕಾ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಸಿಐಟಿಯು ವತಿಯಿಂದ ಸ್ಟೇಷನ್ ಮಾಸ್ಟರ್ ಮೂಲಕ ಪ್ರಧಾನಿ ಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸಿಐಟಿಯು ತಾಲ್ಲೂಕು ಸಮಿತಿಯ ಅಧ್ಯಕ್ಷ ರಾಮ ಕರ್ಕಡ, ಕಾರ್ಯದರ್ಶಿ ಕವಿರಾಜ್, ಸಿಐಟಿಯು ಮುಖಂಡರಾದ ಶಶಿಧರ್ ಗೊಲ್ಲ, ಶೇಖರ್ ಬಂಗೇರ, ದಯಾನಂದ ಕೋಟ್ಯಾನ್, ಶುಭಾಷ್ ನಾಯಕ್, ವಿದ್ಯಾರಾಜ್, ಮೋಹನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.