ಉಡುಪಿ: ನನ್ನನ್ನು ಉಡುಪಿ ಜಿಲ್ಲಾ ಮಟ್ಟದ ಸ್ಥಳೀಯ ದೂರು ಸಮಿತಿಗೆ ಆಯ್ಕೆ ಮಾಡಿ ಆದೇಶ ಹೊರಡಿಸಿದ ದಿನವೇ ಯಾವ ಕಾರಣಕ್ಕಾಗಿ ಆದೇಶವನ್ನು ಹಿಂಪಡೆಯಲಾಯಿತು ಎಂಬುದನ್ನು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ವಕೀಲೆ ಮತ್ತು ಬೆಳ್ಮಣ್ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಹನಾ ಕುಂದರ್ ಒತ್ತಾಯಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ನನ್ನನ್ನು ಜುಲೈ 8ರಂದು ಜಿಲ್ಲಾಮಟ್ಟದ ಸ್ಥಳೀಯ ದೂರು ಸಮಿತಿಗೆ ಆಯ್ಕೆ ಮಾಡಲಾಗಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದರು.
ಉಡುಪಿಯಲ್ಲಿ ಮಹಿಳೆಯರಿಗೆ ಆಗುವ ಲೈಂಗಿಕ ದೌರ್ಜನ್ಯ, ಕಿರುಕುಳದ ವಿರುದ್ಧ ಮುಕ್ತವಾಗಿ ದೂರು ಸಲ್ಲಿಸುವ ವೇದಿಕೆಯಾಗಿರುವ ಈ ಸಮಿತಿಗೆ ನನ್ನನ್ನು ಆಯ್ಕೆ ಮಾಡಿದ್ದು ಸಂತೋಷವಾಗಿತ್ತು. ಇದನ್ನು ಖುಷಿಯಿಂದಲೇ ನಾನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದೆ.
ಆದರೆ ಈ ಆದೇಶ ಹೊರಬಿದ್ದ ಅದೇ ದಿನ ರಾತ್ರಿ ಜಿಲ್ಲಾಧಿಕಾರಿಗಳು ಆದೇಶವನ್ನು ತಡೆಹಿಡಿದಿದ್ದರು. ಇದರಿಂದ ನನಗೆ ಬಹಳ ನೋವಾಗಿದ್ದು, ನನ್ನ ಮಾನನಷ್ಟ ಆಗಿದೆ. ಈ ಬಗ್ಗೆ ಅವರು ಸೂಕ್ತ ಕಾರಣವನ್ನು ನನಗೆ ಕೊಡಬೇಕು. ಆದೇಶ ಹೊರಡಿಸಿದ ದಿನವೇ ಯಾವ ಕಾರಣಕ್ಕಾಗಿ ಆದೇಶವನ್ನು ಹಿಂಪಡೆಯಲಾಯಿತು ಎಂಬುದನ್ನು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಈ ಬೇಜವಾಬ್ದಾರಿ ವರ್ತನೆ ನನಗೆ ನೋವುಂಟು ಮಾಡಿದೆ. ಈ ಸಂಬಂಧ ನಾನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಗೆ ದೂರನ್ನೂ ನೀಡಿದ್ದೇನೆ ಎಂದು ಹೇಳಿದ್ದಾರೆ.
ರಾಜಕೀಯ ಒತ್ತಡವೇ ಕಾರಣ:
ಸಹನಾ ಕುಂದರ್ ಅವರು ವಕೀಲ ವೃತ್ತಿಯ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಅವರು, ಕಳೆದ ಚುನಾವಣೆ ಸಂದರ್ಭ ಬಿಜೆಪಿ ಜೊತೆ ಭಿನ್ನಾಭಿಪ್ರಾಯ ಹೊಂದಿ ಬಳಿಕ ಪಕ್ಷೇತರರಾಗಿ ನಿಂತು ಜಯಗಳಿಸಿ, ಬಳಿಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹೀಗಾಗಿ ರಾಜಕೀಯ ಒತ್ತಡದಿಂದಲೇ ಜಿಲ್ಲಾಧಿಕಾರಿಗಳು ನನಗೆ ನೀಡಿದ ಆದೇಶವನ್ನು ವಾಪಸು ಪಡೆದಿದ್ದಾರೆ ಎಂಬುದು ಸಹನಾ ಅವರ ಆರೋಪವಾಗಿದೆ.