ಶ್ರೀಕೃಷ್ಣಮಠಕ್ಕೆ ರಾಷ್ಟ್ರಪತಿ ಭೇಟಿ: ನಗರದಾದ್ಯಂತ ಪೊಲೀಸ್ ಕಣ್ಗಾವಲು

ಉಡುಪಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಉಡುಪಿಗೆ ಭೇಟಿ ನೀಡಲಿದ್ದು, ಮೊದಲು ಶ್ರೀಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಪಡೆಯುವರು. ಬಳಿಕ ಪೇಜಾವರ ಮಠದಲ್ಲಿ ನಡೆಯುವ ಪೇಜಾವರ ಶ್ರೀಗಳ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವರು. ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲು ಜಿಲ್ಲಾಡಳಿತ ಸಕಲ ರೀತಿಯ ಸಿದ್ದತೆ ಮಾಡಿಕೊಂಡಿದೆ.
ರಾಷ್ಟ್ರಪತಿ ಮಧ್ಯಾಹ್ನ 11 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿ ಅಲ್ಲಿಂದ 11.45ಕ್ಕೆ ಸುಮಾರಿಗೆ ವಾಯು ಸೇನಾ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆದಿ ಉಡುಪಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಆದಿ ಉಡುಪಿ ಹೆಲಿಪ್ಯಾಡ್ ಗೆ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ.
ರಾಷ್ಟ್ರಪತಿ ಭೇಟಿಗೆ ಉಡುಪಿ ರೆಡಿ:
ಆದಿ ಉಡುಪಿ ಹೆಲಿಪ್ಯಾಡ್‌ನಿಂದ ವಿಶೇಷ ವಾಹನದಲ್ಲಿ ಬನ್ನಂಜೆಯಲ್ಲಿರುವ ಪ್ರವಾಸಿ ಮಂದಿರಕ್ಕೆ ಆಗಮಿಸಿ, ಅಲ್ಲಿಂದ ಶ್ರೀಕೃಷ್ಣಮಠಕ್ಕೆ ತೆರಳಿ ಶ್ರೀಕೃಷ್ಣ ದರ್ಶನ ಪಡೆದು, ಬಳಿಕ ಪೇಜಾವರ ಮಠಕ್ಕೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬನ್ನಂಜೆ ಪ್ರವಾಸಿ ಮಂದಿರಕ್ಕೆ ಬಣ್ಣ ಬಳಿದು ಶುಚಿಗೊಳಿಸಲಾಗಿದೆ. ಕಳೆದ ವರ್ಷ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಭೇಟಿ ನೀಡಿದ ವೇಳೆ ಲಕ್ಷಾಂತರ ರೂಪಾಯಿ ವ್ಯಯಿಸಿ ನವೀಕರಿಸಲಾಗಿದ್ದ ಕೊಠಡಿಯಲ್ಲೇ ರಾಷ್ಟ್ರಪತಿ ಕೋವಿಂದ್ ಅವರು ವಿಶ್ರಾಂತಿ ಪಡೆಯಲಿದ್ದಾರೆ ಹೇಳಲಾಗುತ್ತಿದೆ. ಆದರೆ ಇನ್ನೊಂದು ಮೂಲದ ಪ್ರಕಾರ ರಾಷ್ಟ್ರಪತಿಗಳು ಆದಿ ಉಡುಪಿ ಹೆಲಿಪ್ಯಾಡ್‌ನಿಂದ ನೇರವಾಗಿ ಮಠಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಆದರೂ ಪ್ರವಾಸಿ ಮಂದಿರ ರಾಷ್ಟ್ರಪತಿ ಗಳ ಸ್ವಾಗತಕ್ಕೆ ಸಜ್ಜುಗೊಂಡಿದೆ.
ರಾಷ್ಟ್ರಪತಿ ಆಗಮಿಸುವ ಹಿನ್ನೆಲೆಯಲ್ಲಿ ಶ್ರೀಕೃಷ್ಣಮಠ ಹಾಗೂ ಪೇಜಾವರ ಮಠದ ಸುತ್ತಮುತ್ತ ಸ್ವಚ್ಛಗೊಳಿಸಲಾಗಿದೆ. ಎಸ್ಪಿ, ಎಎಸ್ಪಿ, ಸಿಇಒ ಮೊದಲಾದ ಹಿರಿಯ ಅಧಿಕಾರಿಗಳು ದೇವಸ್ಥಾನ ಹಾಗೂ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದಾದ್ಯಂತ ಹೈ ಆಲರ್ಟ್:
ಜಿಲ್ಲಾ ಪೊಲೀಸ್ ಇಲಾಖೆ ನಗರದಾದ್ಯಂತ ಬೀಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದೆ.  ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭದ್ರತೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.
ಸಾವಿರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕೆಎಸ್‌ಆರ್‌ಪಿ ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಮತ್ತು ಹೊರ ಜಿಲ್ಲೆಯ ಶ್ವಾನದಳ, ಸಿವಿಲ್ ಪೊಲೀಸರನ್ನು ಅಲ್ಲದೇ ಹೊರ ಜಿಲ್ಲೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ರಾಷ್ಟ್ರಪತಿ ಆಗಮಿಸುವ ಮಾರ್ಗದುದ್ದಕ್ಕೂ ಪೊಲೀಸ್ ಭದ್ರತೆ ನೀಡಲಾಗಿದೆ. ನಗರದ ಮೇಲೆ ಈಗಾಗಲೇ ರಾಷ್ಟ್ರದ ಎಲ್ಲಾ ಗುಪ್ತಚರ ಸಂಸ್ಥೆ ಹದ್ದಿನ ಕಣ್ಣಿರಿಸಿದೆ. ರಾಷ್ಟ್ರೀಯ ಭದ್ರತೆ ಪಡೆ ಹೆಲಿಪ್ಯಾಡ್ ಮತ್ತು ಪ್ರವಾಸಿ ಮಂದಿರ, ಪೇಜಾವರ ಮಠವನ್ನು ಒಂದೆರಡು ಸುತ್ತುಗಳಲ್ಲಿ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ.
ಅಂಗಡಿ ಮುಂಗಟ್ಟು ಬಂದ್:
ರಾಷ್ಟ್ರಪತಿ ಕೃಷ್ಣ ಮಠಕ್ಕೆ ಭೇಟಿ ನೀಡುವುದರಿಂದ ಭದ್ರತೆಯ ದೃಷ್ಟಿಯಿಂದ ಸಂಸ್ಕೃತ ಕಾಲೇಜು ಪಕ್ಕದ ಗೇಟಿನಿಂದ ಸಂಪೂರ್ಣ ರಥಬೀದಿಯ ಸುತ್ತ ಹಾಗೂ ರಾಜಾಂಗಣದ ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಇಂದು ಬೆಳಗ್ಗೆಯಿಂದ  ಮಧ್ಯಾಹ್ನ 3 ಗಂಟೆಯವರೆಗೆ ಸಂಪೂರ್ಣ ಬಂದ್ ಆಗಲಿದೆ.
ಡಿ. 27ರಂದು ಬೆಳಿಗ್ಗೆ 7ಗಂಟೆಯಿಂದ 2ರ ವರೆಗೆ ಶ್ರೀಕೃಷ್ಣಮಠದಲ್ಲಿ ದೇವರ ದರ್ಶನ ನಿಷೇಧಿಸಲಾಗಿದೆ.