ಮಕ್ಕಳನ್ನು ಪ್ರತಿಭಾವಂತರಾಗಿ ರೂಪಿಸಲು‌ ಮೌಲ್ಯಗಳನ್ನು ಕಲಿಸಿಕೊಡಬೇಕು: ಡಾ. ನಿಕೇತನ

ಉಡುಪಿ: ಪ್ರಸ್ತುತ ಮಕ್ಕಳನ್ನು ಪ್ರತಿಭಾವಂತ ವ್ಯಕ್ತಿಗಳನ್ನಾಗಿ ರೂಪಿಸಬೇಕಾದರೆ ಒಳ್ಳೆಯ ಶಿಕ್ಷಣದ ಜತೆಗೆ ಉತ್ತಮ ಮೌಲ್ಯಗಳನ್ನು ಕಲಿಸಿಕೊಡಬೇಕು ಎಂದು ಹಿರಿಯಡಕ ಸರ್ಕಾರಿ‌ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನಾ ಹೇಳಿದರು.
ಉಡುಪಿ ಬಡಗಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಆಶ್ರಯದಲ್ಲಿ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಸಮಾರಂಭವದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ಪ್ರೀತಿಸುವ ಮನೋಭಾವ ಬೆಳೆಸುವುದು ಬಹಳ ಉತ್ತಮವಾದ ಮೌಲ್ಯ. ಅಪ್ಪ–ಅಮ್ಮ,‌ ಸಹೋದರ–ಸಹೋದರಿ, ಗುರುಗಳು ಹಾಗೂ ಸಂಬಂಧಗಳನ್ನು ಪ್ರೀತಿಸುವ ಗುಣವನ್ನು ಮಕ್ಕಳಲ್ಲಿ ಬೆಳೆಸಬೇಕು. ವಿವಿಧ ಬಗೆಯ ಮೊಬೈಲ್‌ ಆ್ಯಪ್‌ಗಳು ಒಂದು ಕಡೆ ಓದಿಗೆ ಪೂರಕವಾಗಿದ್ದರೆ, ಇನ್ನೊಂದು ಕಡೆ ಮಕ್ಕಳನ್ನು ಸಂಬಂಧಗಳಿಂದ ವಿಮುಖರಾಗುವಂತೆ ಮಾಡುತ್ತಿವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಉಡುಪಿ ನಗರ ಠಾಣೆಯ ಎಸ್‌ಐ ಕೆ.ವಿ. ಅನಂತ ಪದ್ಮನಾಭ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ಮಾಡುವುದರ ಜತೆಗೆ ಅವರಲ್ಲಿ ಉತ್ತಮ ಚಟುವಟಿಕೆಗಳನ್ನು ಬೆಳೆಸಲು ಪ್ರೋತ್ಸಾಹ ನೀಡಬೇಕು. ಉತ್ತಮ ಪರಿಸರ ನಿರ್ಮಾಣ ಮಾಡಬೇಕು.
ಮನೆಯಿಂದಲೇ ಮಕ್ಕಳನ್ನು ತಿದ್ದುವ ಮೂಲಕ ಅವರ ಮನಸ್ಥಿತಿಯನ್ನು ಬದಲಾಯಿಸಬೇಕು. ತಪ್ಪು ದಾರಿ ತುಳಿಯದಂತೆ ನೋಡಬೇಕು ಎಂದು ಸಲಹೆ ನೀಡಿದರು.
ಬಡಗಬೆಟ್ಟು ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್‌ ಅಧ್ಯಕ್ಷತೆ ವಹಿಸಿದ್ದರು. ಸೊಸೈಟಿಯ ಉಪಾಧ್ಯಕ್ಷ ಎಲ್‌. ಉಮಾನಾಥ್‌, ಲಕ್ಷ್ಮೀನಾರಾಯಣ ಪ್ರಭು ಉಪಸ್ಥಿತರಿದ್ದರು. ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮರ್ಥ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಶೆಟ್ಟಿ ವಂದಿಸಿದರು.