ಉಡುಪಿ: ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಸಸ್ಯಶಾಸ್ತ್ರಜ್ಞ ಡಾ. ಎಸ್.ಎಲ್. ಕರಣಿಕ್ (81) ಮಂಗಳವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು.
ಮೂಲತಃ ಕುಂದಾಪುರ ತಾಲೂಕಿನ ಸುಳ್ಸೆಯವರಾಗಿರುವ ಡಾ. ಕರಣಿಕ್, ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥ ಮತ್ತು ಪ್ರಾಚಾರ್ಯರಾಗಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಹವ್ಯಕ ಸಭಾ ಉಡುಪಿಯ ಅಧ್ಯಕ್ಷ, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಉಪಾಧ್ಯಕ್ಷ, ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಮಲ್ಲಂಪಳ್ಳಿ ವಿಷ್ಣುಮೂರ್ತಿ ಕ್ಷೇತ್ರಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಗೂ ಉಡುಪಿಯ ಪರ್ಯಾಯೋತ್ಸವಗಳಲ್ಲೂ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನ ಸಹಿತ ಅಪಾರ ಬಂಧುಬಳಗ, ಶಿಷ್ಯಂದಿರನ್ನು ಅಗಲಿದ್ದಾರೆ.
ಸಂತಾಪ: ಡಾ. ಕರಣಿಕ್ ನಿಧನಕ್ಕೆ ಅದಮಾರು ಉಭಯ ಸ್ವಾಮೀಜಿ, ಪೇಜಾವರ ಶ್ರೀ, ಶ್ರೀ ರಾಘವೇಶ್ವರ ಸ್ವಾಮೀಜಿ, ಶಾಸಕ ಕೆ.ರಘುಪತಿ ಭಟ್, ಬೈಕಾಡಿ ಸುಪ್ರಸಾದ ಶೆಟ್ಟಿ ಹಾಗೂ ಹವ್ಯಕ ಸಭಾ ಉಡುಪಿ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ತೀವ್ರ ಶೋಕ ವ್ಯಕ್ತಪಡಿಸಿದೆ.