ಉಡುಪಿ: ಅಕ್ರಮ ಹೋಂಸ್ಟೇಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ- ಪೊಲೀಸ್ ಇಲಾಖೆ ಎಚ್ಚರಿಕೆ

ಮಲ್ಪೆಯಲ್ಲಿ 15 ಸಹಿತ ಜಿಲ್ಲೆಯಲ್ಲಿ ಒಟ್ಟು 32 ಅಕ್ರಮ ಹೋಂಸ್ಟೇ ಪತ್ತೆ

ಉಡುಪಿ: ಕೊಡಗು ಜಿಲ್ಲೆಯ ಹೋಂಸ್ಟೇಯೊಂದರಲ್ಲಿ ವಿದೇಶಿ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿರುವ ಪೊಲೀಸ್ ಇಲಾಖೆ, ಉಡುಪಿ ಜಿಲ್ಲೆಯಲ್ಲಿಯೂ ವಿಶೇಷ ಕಾರ್ಯಾಚರಣೆ ನಡೆಸಿದೆ.

ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು (ಕಾನೂನು ಸುವ್ಯವಸ್ಥೆ) ಅವರ ನಿರ್ದೇಶನದಂತೆ ಕೈಗೊಂಡ ಈ ಕಾರ್ಯಾಚರಣೆಯಲ್ಲಿ, ಜಿಲ್ಲೆಯಲ್ಲಿ ಒಟ್ಟು 32 ಅಕ್ರಮ ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ.

ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15, ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2, ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7, ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 32 ಹೋಂ ಸ್ಟೇ ಗಳು ಕಾರ್ಯನಿರ್ವಹಿಸುತ್ತಿವೆ. ಈ ಅಕ್ರಮ ಹೋಂಸ್ಟೇಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಹೋಂಸ್ಟೇ ಮತ್ತು ರೆಸಾರ್ಟ್‌ ಮಾಲೀಕರು ಕಡ್ಡಾಯವಾಗಿ ಪರವಾನಿಗೆ ನಿಯಮಗಳು ಹಾಗೂ ನಿಬಂಧನೆಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ವಿದೇಶಿ ಅತಿಥಿಗಳು ಹೋಂಸ್ಟೇ ಅಥವಾ ರೆಸಾರ್ಟ್‌ಗೆ ಆಗಮಿಸಿದಲ್ಲಿ, ಅವರ ವಿವರಗಳನ್ನು ಒಳಗೊಂಡ ‘ಫಾರ್ಮ್ C’ ಅನ್ನು FRRO (Foreigners Regional Registration Office) ಆನ್‌ಲೈನ್ ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕು. ಜೊತೆಗೆ ಸಂಬಂಧಿತ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಹಾಗೆಯೇ, ಹೋಂಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ವಾಸಿಸುವ ವಿದೇಶಿಯರ ಭದ್ರತೆಯ ಮೇಲೆ ಹೆಚ್ಚಿನ ನಿಗಾ ವಹಿಸಲು ಸೂಚನೆ ನೀಡಲಾಗಿದೆ.

ಈ ಕ್ರಮಗಳ ಮೂಲಕ ಜಿಲ್ಲೆಯಲ್ಲಿ ಪ್ರವಾಸಿಗರ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವುದು ಉದ್ದೇಶವಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ