ನಿಯಮ ಉಲ್ಲಂಘನೆ ವಾಹನ ಚಾಲಕರ ಲೈಸೆನ್ಸ್ ರದ್ದತಿಗೆ ಪ್ರಸ್ಥಾವನೆ,  ಸರಕು ಸಾಗಾಟ ವಾಹನದಲ್ಲಿ ಮಾನವ ಸಾಗಾಟ

ಉಡುಪಿ: ಜಿಲ್ಲೆಯಲ್ಲಿ ಕಾನೂನು ಉಲ್ಲಂಘಿಸಿ ಶಾಲಾ ಮಕ್ಕಳನ್ನು ಸಾಗಿಸುತಿದ್ದ 51 ಶಾಲಾ ವಾಹನ, ಮಾನವರನ್ನು ಸಾಗಿಸುತಿದ್ದ 100 ಸರಕು ಸಾಗಾಟ ವಾಹನಗಳ ಮೇಲೆ ಕೇಸು ದಾಖಲಿಸಿ ದಂಡ ವಿಧಿಸಲಾಗಿದ್ದು, ಮೂರು ತಿಂಗಳಮಟ್ಟಿಗೆ ಚಾಲಕರ ಪರವಾನಿಗೆ ಲೈಸೆನ್ಸ್ ರದ್ಧತಿಗೆ ಆರ್‌ಟಿಒಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಎಸ್‌ಪಿ ಫೋನ್ ಇನ್ ಕಾರ್ಯಕ್ರಮದಲ್ಲಿ ಈ ಕುರಿತು ಸಾರ್ವಜನಿಕರು‌ ಮನವಿ ಮಾಡಿದರು.
ರಿಕ್ಷಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲ ಮಕ್ಕಳನ್ನು ಸಾಗಿಸಲಾಗುತ್ತದೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಸಾರ್ವಜನಿಕರು ಎಸ್‌ಪಿ ಅವರಲ್ಲಿ ತಿಳಿಸಿದರು.
ಅಪಘಾತ ಪ್ರಮಾಣ ಕಡಿಮೆಯಾಗಿಸುವುದು, ಸಾರ್ವಜನಿಕ ಹಿತದೃಷ್ಟಿಯಿಂದ ಸುಪ್ರೀಂಕೋರ್ಟ್ ನಿಯಮಾವಳಿ, ಮಾರ್ಗದರ್ಶನದಂತೆ ಜಿಲ್ಲೆಯಲ್ಲಿ, ಶಾಲಾ ವಾಹನಗಳ ನಿಯಮ ಉಲ್ಲಂಘನೆಯಾದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ನಗರದ ಅಜ್ಜರಕಾಡು ಕಾಲೇಜಿನ ವಿದ್ಯಾರ್ಥಿಗಳು ತರಗತಿಗೆ ಹೋಗದೇ ಇಲ್ಲಿನ ಭುಜಂಗ ಪಾರ್ಕ್‌ನಲ್ಲಿ ದಿನವಿಡೀ ಕಾಲಹರಣಮಾಡುತ್ತಾರೆ ಎಂದು ನಾಗರಿಕರೊಬ್ಬರು ಎಸ್‌ಪಿ ಅವರಲ್ಲಿ ದೂರು ಹೇಳಿದರು.
ಪ್ರತಿಕ್ರಿಯಿಸಿದ ಎಸ್ಪಿ ನಿಶಾ ಜೇಮ್ಸ್, ಕಾಲೇಜಿನ ಪ್ರಾಂಶುಪಾಲರಿಗೆ ಮಾಹಿತಿ ನೀಡುವಂತೆ ಮತ್ತು ಶಿಕ್ಷಣ ಇಲಾಖೆ ಮೂಲಕ ಜಿಲ್ಲೆಯ ಎಲ್ಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ಸೂಕ್ತ ಸೂಚನೆ ನೀಡಲು ಸುತ್ತೋಲೆ ಕಳುಹಿಸುವುದಾಗಿ ಭರವಸೆ ನೀಡಿದರು.
ಹಿರಿಯಡ್ಕದಲ್ಲಿ ಮಟ್ಕಾ ಮತ್ತು ಬೀದಿ ನಾಯಿಗಳ ಕಾಟದ ಬಗ್ಗೆ ಸಾರ್ವಜನಿಕರು ದೂರು ಹೇಳಿಕೊಂಡರು. ಮಣಿಪಾಲದ ಸಿಂಡಿಕೇಟ್ ವೃತ್ತದಿಂದ ಡಿಸಿ ಕಚೇರಿ ರಸ್ತೆಯಲ್ಲಿ ಅನಧಿಕೃತ ವಾಹನ ಪಾರ್ಕಿಂಗ್ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ನಾಗರೀಕರು ಮನವಿ ಮಾಡಿಕೊಂಡರು.
ಈ ಬಗ್ಗೆ ವಿಶೇಷ ಕಾರ್ಯಚರಣೆ ನಡೆಸಲಾಗುವುದು ಎಂದು ಎಸ್‌ಪಿ  ಭರವಸೆ ನೀಡಿದರು.
ಚೇರ್ಕಾಡಿಯಲ್ಲಿ ಮಟ್ಕಾ,  ಮಂದಾರ್ತಿಯಲ್ಲಿ ಅಕ್ರಮ ಸರಾಯಿ ಮಾರಾಟ, ಗಂಗೊಳ್ಳಿಯಲ್ಲಿ ಅಕ್ರಮ ಮರಳು ಸಾಗಾಟ ದೂರುಗಳು ಕೇಳಿ ಬಂದವು.