ಉಡುಪಿ: ನಾಳೆಯಿಂದ (ಜೂನ್ 2) ಸೀಲ್ ಡೌನ್ ಮಾಡಲಾಗುವ ಜಿಲ್ಲೆಯ 35 ಗ್ರಾಮ ಪಂಚಾಯತ್ ಗಳಲ್ಲಿ ಕೆಎಂಎಫ್ ಹಾಲಿನ ಬೂತುಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.
ಹಾಗೆ, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ಸೀಮಿತ ಅವಧಿಗೆ ಹಾಲಿನ ಸಂಗ್ರಹಕ್ಕೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಅನುಮತಿ ನೀಡಿರುವ ವಿವಾಹ ಸಮಾರಂಭವನ್ನು ನಡೆಸಲು ಅವಕಾಶವಿದೆ. ಅಗತ್ಯ ತುರ್ತು ವೈದ್ಯಕೀಯ ಸೇವೆಯ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪೆಟ್ರೋಲ್ ಬಂಕ್ ಗಳು ಕಾರ್ಯಚರಿಸಲು ಅನುಮತಿಸಲಾಗಿದೆ.
ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಮಾಡಬಹುದು. ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಮ್ ಗಳು, ಕ್ಲಿನಿಕ್, ಕ್ಲಿನಿಕಲ್ ಲ್ಯಾಬ್ಸ್, ಟೆಲಿಮೆಡಿಸಿನ್ ಸೌಲಭ್ಯಗಳು, ಔಷಧಾಲಯಗಳು, ಜನ ಔಷಧಿ ಕೇಂದ್ರ ಹಾಗೂ ರಕ್ತ ಸಂಗ್ರಹ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.