ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಕಾಣದ ಚೇತರಿಕೆ: ತನ್ನ ಅಂತಿಮ ಆಸೆಯಂತೆ ಆಸ್ಪತ್ರೆಯಿಂದ ಮಠಕ್ಕೆ ಸ್ಥಳಾಂತರ

ಉಡುಪಿ: ಶ್ವಾಸಕೋಶ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ರಥಬೀದಿ ಪೇಜಾವರ ಮಠಕ್ಕೆ  ಭಾನುವರ ಬೆಳಗ್ಗೆ ‌6:55ಕ್ಕೆ ಸ್ಥಳಾಂತರಿಸಲಾಯಿತು.
ತಜ್ಞ ವೈದ್ಯಕೀಯ ತಂಡ ಬಿಗು ಪೊಲೀಸ್ ಭದ್ರತೆಯಲ್ಲಿ ಕೃತಕ ಉಸಿರಾಟ ವ್ಯವಸ್ಥೆಯಲ್ಲೇ ಮಣಿಪಾಲದ ವಿಶೇಷ ಆಂಬುಲೆನ್ಸ್​ನಲ್ಲಿ ಮಠಕ್ಕೆ ಕರೆದೊಯ್ಯಲಾಯಿತು. ಶ್ರೀಗಳ ಅಂತಿಮ‌ ಆಸೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸ್ಥಳಾಂತರ ವೇಳೆ ಸುಮಾರು 700 ಕ್ಕೂ‌ಅಧಿಕ ಮಂದಿ ಪೊಲಿಸ್ ಅಧಿಕಾರಿ ಮತ್ತು ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.
ಪೇಜಾವರ ಪೂರ್ವಾಶ್ರಮದ ಸಹೋದರ ರಘುರಾಮ ಆಚಾರ್ಯ, ಮಾಜಿ ಸಚಿವ ರಾಮದಾಸ್​ ಮತ್ತು ಶಾಸಕ ರಘುಪತಿ ಭಟ್​ ಭೇಟಿ ನೀಡಿ ಶ್ರೀಗಳನ್ನು ಸ್ಥಳಾಂತರಿಸುವಾಗ ಜತೆಯಲ್ಲಿದ್ದರು. ಸಂಸದೆ ಶೋಭಾ ಕರಂದ್ಲಾಜೆ ಕೂಡ ಸ್ಥಳದಲ್ಲಿದ್ದರು.
ಪೇಜಾವರ ಶ್ರೀಗಳನ್ನ ಸ್ಥಳಾಂತರಿಸುವ ಮುನ್ನ ಪೇಜಾವರ ಮಠಕ್ಕೆ ಶ್ವಾನದಳ ತಂಡ ಆಗಮಿಸಿ ಪರಿಶೀಲನೆ ನಡೆಸಿತು. ಅಲ್ಲದೆ, ಮಠದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್​ ಕಲ್ಪಿಸಲಾಗಿದೆ.
ನ್ಯುಮೇನಿಯ (ಶ್ವಾಸಕೋಶ ಉಸಿರಾಟ ಸಮಸ್ಯೆ)ಯಿಂದಾಗಿ ಡಿ.20ರಂದು ಶ್ರೀಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ಶ್ರೀಗಳಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತಿದ್ದರು. ಆದರೆ ಶನಿವಾರ ಶ್ರೀಗಳ ದೇಹ ಸ್ಥಿತಿ ಗಂಭೀರವಾಗಿತ್ತು. ಅಲ್ಲದೇ ಶನಿವಾರ ಸಾಯಂಕಾಲ ಮಿದುಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ವೈದ್ಯರು ತಿಳಿಸಿದ್ದರು. ಹೀಗಾಗಿ ಪೇಜಾವರ ಕಿರಿಯ ಶ್ರೀಗಳು ಅವರ ಇಚ್ಛೆಯಂತೆ ಮಠಕ್ಕೆ ಕರೆದುಕೊಂಡು ಹೋಗುವುದಾಗಿ ಶನಿವಾರ ಸಂಜೆ ತಿಳಿಸಿದ್ದು, ಅದರಂತೆ ಭಾನುವಾರ ಬೆಳಿಗ್ಗೆ ಕರೆದೊಯ್ಯಲಾಗಿದೆ.