ಆ.5 ರಿಂದ ಪ್ರತೀ ಮನೆ ಮನಗಳಲ್ಲಿ ಶ್ರೀರಾಮ – ಹನುಮರ ಭಕ್ತಿ ಉಕ್ಕಲಿ: ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು

ಉಡುಪಿ: ಆಗಸ್ಟ್ 5 ರಂದು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಈ ಧರ್ಮಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸುವವರಿದ್ದಾರೆ .

ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಧರ್ಮಶ್ರದ್ಧೆಯುಳ್ಳ ಮನೆ ಮನಸ್ಸುಗಳಲ್ಲಿ ಶ್ರೀ ರಾಮ- ಶ್ರೀ ಹನುಮರ ಭಕ್ತಿಗಳು ನ್ಯಾಸಗೊಳ್ಳಬೇಕು ಎಂದು ಅಯೋಧ್ಯೆ ಶ್ರೀ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಇದರ ವಿಶ್ವಸ್ಥಮಂಡಳಿ ಸದಸ್ಯರಾದ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.

ಆಗಸ್ಟ್ 5 ನೇ ದಿನಾಂಕ ಈ ದೇಶದ ಇತಿಹಾಸದಲ್ಲಿ ಸ್ಮರಣೀಯ ದಿನವಾಗಿ ದಾಖಲಾಗಲಿದೆ . ಆದ್ದರಿಂದ ಅಯೋಧ್ಯೆಯಲ್ಲಿ ಅಂದು ನಡೆಯುವ ಶಿಲಾನ್ಯಾಸ ಸಮಾರಂಭವನ್ನು ಸಾಧ್ಯವಾದಷ್ಟು ಪ್ರತಿಯೊಬ್ಬರೂ ನೇರಪ್ರಸಾರದ ಮೂಲಕ ಕಣ್ತುಂಬಿಕೊಳ್ಳಬೇಕು .
ಮನೆಗಳಲ್ಲಿ ಟಿವಿ ಇಲ್ಲದವರಿಗೆ ಬೇಕಾಗಿ ಪ್ರತಿಯೊಂದು ಹಳ್ಳಿ ನಗರಗಳಲ್ಲಿ ಸಾರ್ವಜನಿಕವಾಗಿ ಪ್ರಮುಖ ಸ್ಥಳಗಳಲ್ಲಿ ಬೃಹತ್ ಪರದೆಯನ್ನು ಅಳವಡಿಸಿ ವೀಕ್ಷಿಸಲು ವ್ಯವಸ್ಥೆಮಾಡಬೇಕು . ಆದರೆ ಈ ಸಂದರ್ಭದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ‌, ಮುಖಕ್ಕೆ ಮಾಸ್ಕ್ ಧರಿಸುವುದನ್ನು ಮರೆಯಬಾರದು ಎಂದರು.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಂದಿರ ಕೇವಲ ಅಯೋಧ್ಯೆಗೆ ಸೀಮಿತವಾದುದಲ್ಲ, ಅದು ಭಾರತ ಮಂದಿರ, ರಾಷ್ಟ್ರಮಂದಿರ ನಮ್ಮೆಲ್ಲರ ಆರಾಧ್ಯಮೂರ್ತಿಯ ಮಂದಿರವನ್ನು ನಿರ್ಮಿಸುವ ಯೋಗ ನಮಗೆಲ್ಲ ಒದಗಿರುವುದು ದೊಡ್ಡ ಪುಣ್ಯವೇ ಸರಿ . ಆದ್ದರಿಂದ ಈ ಮಹತ್ಕಾರ್ಯ ನಿರ್ವಿಘ್ನವಾಗಿ ನಡೆಯಬೇಕು . ಅದನ್ನು ನಿರ್ವಹಿಸುವ ಶಕ್ತಿ ಚೈತನ್ಯ ಸಮಸ್ತ ಭಾರತೀಯರಿಗೆ ಬೇಕೇ ಬೇಕು . ಅದಕ್ಕಾಗಿ ಆಗಸ್ಟ್ 5 ರಿಂದ ಮಂದಿರ ನಿರ್ಮಾಣಕಾರ್ಯ ಪೂರ್ಣವಾಗುವವರೆಗೂ ದೇಶದ ನಮ್ಮೆಲ್ಲರ ಮನೆ ಮನೆಗಳಲ್ಲಿ ಮಂದಿರಗಳಲ್ಲಿ ಶ್ರೀ ರಾಮ ಶ್ರೀ ಹನುಮರ ವಿಶೇಷ ಸ್ಮರಣೆ ನಡೆಯಬೇಕು ಎಂದರು.

ನಿತ್ಯ ಪ್ರಾರ್ಥನೆ ಭಜನೆ ಜಪ ಇತ್ಯಾದಿ ಗಳನ್ನು ನಡೆಸಬೇಕು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿಯೂ ಇವುಗಳನ್ನು ನಡೆಸಬೇಕು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಪಿ ವಿಷ್ಣುಮೂರ್ತಿ ಆಚಾರ್ಯ,
ಸುನಿಲ್ ಕೆ ಆರ್,ದಿನೇಶ್ ಮೆಂಡನ್ ಉಪಸ್ಥಿತರಿದ್ದರು.