ಉಡುಪಿ: ಜ. 17ಮತ್ತು 18ರಂದು ನಡೆಯುವ ಅದಮಾರು ಪರ್ಯಾಯ ಉತ್ಸವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಆಗಮಿಸಲಿದ್ದು,
ಈ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಮುಂಜಾಗೃತ ಕ್ರಮವಾಗಿ ಬೀಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಬಿಗಿ ಭದ್ರತೆ:
1 -ಎಸ್ಪಿ, 1 ಎಎಸ್ಸಿ, 8 ಡಿವೈಎಸ್ಪಿ, 23 ಇನ್‌ಸ್ಪೆಕ್ಟರ್, 65 -ಪಿಎಸ್‌ಐ, 193 -ಎಎಸ್‌ಐ, 289 ಎಚ್‌ಸಿ ಹಾಗೂ 530 ಪೊಲೀಸ್ ಕಾನ್ಸ್‌ಟೇಬಲ್ ಸೇರಿದಂತೆ 1110 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 300 ಗೃಹರಕ್ಷಕಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯುಕ್ತಿಗೊಳಿಸಲಾಗಿದೆ. 4 ಕೆಎಸ್‌ಆರ್‌ಪಿ, 10 ಡಿಎಆರ್, 5 ವಿದ್ವಂಸಕ ಕೃತ್ಯ ಪತ್ತೆ ತಂಡವನ್ನು ನಿಯೋಜಿಸಲಾಗಿದ್ದು, ಕೃಷ್ಣಮಠದ ಸುತ್ತ ಸಿಸಿ ಕ್ಯಾಮರ ಅಳವಡಿಸಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಕೃಷ್ಣಮಠದ ವಠಾರ ಮತ್ತು ಸರ್ವೀಸ್ ಬಸ್ ನಿಲ್ದಾಣದ ಬಳಿ ಹೊರಠಾಣೆ ತೆರಯಲಾಗಿದೆ. ಅಂಬಾಗಿಲು, ಇಂದ್ರಾಳಿ, ಕುಕ್ಕಿಕಟ್ಟೆ. ಬಲಾಯಿಪಾದೆ ಕ್ರಾಸ್‌ನಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ.
ಮಾರ್ಗ ಬದಲಾವಣೆ:
ಜ. 17ರ ಮಧ್ಯಾಹ್ನ 2ರಿಂದ 18ರ ಬೆಳಿಗ್ಗೆ 7ಗಂಟೆಯವರೆಗೆ ಮಂಗಳೂರು, ಬಲಾಯಿಪಾದೆ, ಅಂಬಲಪಾಡಿ ಕಡೆಯಿಂದ ಉಡುಪಿ ನಗರಕ್ಕೆ ಬರುವ ಎಲ್ಲಾ ವಾಹನಗಳು ಅಂಬಲಪಾಡಿ ಮೂಲಕ ರಾ.ಹೆ. 66ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ ಮತ್ತು ಸರ್ವೀಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು. ಸಂಜೆ 7ಗಂಟೆಯ ಬಳಿಕ ಉಡುಪಿ ನಗರದಲ್ಲಿ ಎಲ್ಲಾ ರೀತಿಯ ವಾಹನ ಪ್ರವೇಶ ನಿಷೇಧಿಸಲಾಗಿದೆ. ಬಳಿಕ ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಪ್ರಯಾಣಿಕರನ್ನು ಅಲ್ಲಿಯೇ ಇಳಿಸಿ ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ಮಂಗಳೂರು ಕಡೆಗೆ ಹೋಗಬೇಕು. ಮಣಿಪಾಲಕ್ಕೆ ಹೋಗುವ ವಾಹನಗಳು ಕರಾವಳಿ ಜಂಕ್ಷನ್ ಮುಂದಕ್ಕೆ ಸಾಗಿ ಅಂಬಾಗಿಲು ಮೂಲಕ ಪೆರಂಪಳ್ಳಿ ರಸ್ತೆಯಿಂದ ಕಾಯಿನ್ ಸರ್ಕಲ್,- ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ತೆರಳಬೇಕು. ಕುಂದಾಪುರ ಬ್ರಹ್ಮಾವರ ಮಾರ್ಗವಾಗಿ ಚಲಿಸುವ ಬಸ್‌ಗಳು ಸಹ ಸಂಜೆ 7ರ ಬಳಿಕ ಕರಾವಳಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ, ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಸ್ಸು ಕುಂದಾಪುರ ಕಡೆಗೆ ಹೋಗಬೇಕು. ಕಾರ್ಕಳ, ಮೂಡುಬೆಳ್ಳೆ, ಅಲೆವೂರು, ಕೊರಂಗ್ರಪಾಡಿ, ಬೈಲೂರು ಕಡೆಗಳಿಗೆ ಹೋಗುವ ಮತ್ತು ಬರುವಂತಹ ವಾಹನಗಳಿಗೆ ಮಿಷನ್ ಕಂಪೌಂಡ್ ಅಂತಿಮ ನಿಲುಗಡೆಯಾಗಿದ್ದು, ಅಲ್ಲಿಂದಲೇ ವಾಪಾಸು ಹಿಂತಿರುಗಬೇಕು.
ಕಾರ್ಕಳ, ಮಣಿಪಾಲಕ್ಕೆ ಹೋಗಿ ಬರುವಂತಹ ವಾಹನಗಳು ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಕಾಯಿನ್ ಸರ್ಕಲ್ ಪೆರಂಪಳ್ಳಿ, ಅಂಬಾಗಿಲು ಮಾರ್ಗವಾಗಿ ಕರಾವಳಿ ಜಂಕ್ಷನ್ ಆಗಮಿಸಿ, ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ಅಂಬಾಗಿಲು– ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲ -ಕಾರ್ಕಳ ಕಡೆಗೆ ಹೋಗಬೇಕು. ಮಂಗಳೂರಿನಿಂದ ಮುಂಬೈ ಹೋಗುವ ಎಲ್ಲಾ ಬಸ್‌ಗಳು ಕರಾವಳಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ನೇರವಾಗಿ ಸಂತೆಕಟ್ಟೆ ಮಾರ್ಗವಾಗಿ ಮುಂಬೈ ಕಡೆಗೆ ತೆರಳಬೇಕು. ಮಲ್ಪೆ ಕಡೆಯಿಂದ ಬರುವಂತಹ ಎಲ್ಲಾ ವಾಹನಗಳು ಆದಿ ಉಡುಪಿ ಜಂಕ್ಷನ್ ವರೆಗೆ ಆಗಮಿಸಿ ನಂತರ ವಾಪಾಸು ಅದೇ ಮಾರ್ಗದಲ್ಲಿ
ಮಲ್ಪೆ ಕಡೆಗೆ ಹಿಂತಿರುಗಬೇಕು. ಮಂಗಳೂರು -ಕುಂದಾಪುರ ಕಡೆಗೆ ಹೋಗುವ ವಾಹನಗಳು ಕರಾವಳಿ ಜಂಕ್ಷನ್ ಮೂಲಕ ಹಾದು ಹೋಗಬೇಕು.
ಸಂಚಾರ ನಿಷೇಧ:
17ರ ಮಧ್ಯಾಹ್ನ 2ರಿಂದ 18ರ ಬೆಳಿಗ್ಗೆ 7ರ ವರೆಗೆ ನಗರದ ಕಿನ್ನಿಮೂಲ್ಕಿ, ಜೋಡುಕಟ್ಟೆ, ಲಯನ್ಸ್ ಸರ್ಕಲ್, ಕೋರ್ಟ್ ರಸ್ತೆ, ಡಯನಾ ಜಂಕ್ಷನ್, ಕೆ.ಎಂ. ಮಾರ್ಗ, ಹನುಮಾನ್
ಸರ್ಕಲ್, ಸಂಸ್ಕೃತ ಕಾಲೇಜ್ ಜಂಕ್ಷನ್, ಕನಕದಾಸ ರಸ್ತೆ, ಬಡಗುಪೇಟೆ ರಸ್ತೆ, ಚಿತ್ತರಂಜನ್ ಸರ್ಕಲ್, ಮಿತ್ರಾ ಆಸ್ಪತ್ರೆ ರಸ್ತೆ, ತೆಂಕುಪೇಟೆ, ಎಲ್‌ವಿಟಿ ತೆಂಕಪೇಟೆ ದೇವಸ್ಥಾನದ ರಸ್ತೆ, ಹರಿಶ್ಚಂದ್ರ ಮಾರ್ಗದಿಂದ ವಿದ್ಯೋದಯ ಶಾಲೆಯವರೆಗೆ, ಕಲ್ಸಂಕದಿಂದ ರಾಜಾಂಗಣ ಪಾರ್ಕಿಂಗ್ ಸ್ಥಳದವರೆಗೆ, ಕಟ್ಟೆ ಆಚಾರ್ಯ ಮಾರ್ಗ ಮತ್ತು
ರಥಬೀದಿಗಳಲ್ಲಿ ಯಾವುದೇ ವಾಹನ ಪ್ರವೇಶ ಮತ್ತು ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ