ಉಡುಪಿ: ಫಲಿಸಿದ ಸೀಲ್ ಡೌನ್ ಅಸ್ತ್ರ; 24 ಗ್ರಾಪಂ ಕೊರೊನಾ ಮುಕ್ತ

ಉಡುಪಿ: ಕೋವಿಡ್ ಎರಡನೇ ಅಲೆ ನಗರ ಪ್ರದೇಶ ಮಾತ್ರವಲ್ಲ, ಗ್ರಾಮೀಣ ಭಾಗಕ್ಕೂ‌ ವಕ್ಕರಿಸಿತ್ತು. ಜೂನ್ 1ರ ವೇಳೆಗೆ ಜಿಲ್ಲೆಯ‌ 155 ಗ್ರಾಪಂಗಳ ಪೈಕಿ 33 ಗ್ರಾಪಂಗಳಲ್ಲಿ 50ಕ್ಕೂ ಅಧಿಕ ಸಕ್ರಿಯ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು 33 ಗ್ರಾಪಂಗಳಲ್ಲಿ ಐದು ದಿನಗಳ ಕಾಲ ಕಂಪ್ಲೀಟ್ ಲಾಕ್ ಡೌನ್ (ಸೀಲ್ ಡೌನ್) ನಿಯಮ ಜಾರಿಗೊಳಿಸಿತು. ಜಿಲ್ಲಾಡಳಿತದ ಈ ದಿಟ್ಟ ಕ್ರಮದಿಂದ ಇದೀಗ 24 ಗ್ರಾಪಂಗಳು ಕೋವಿಡ್ ಮುಕ್ತವಾಗಿವೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಇಳಿಕೆಯಾಗಿದ್ದು, 124 ಗ್ರಾಪಂಗಳಲ್ಲಿ 10ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ. ಉಳಿದ ಏಳು ಗ್ರಾಪಂಗಳಲ್ಲಿ ತಲಾ ಹತ್ತು ಪ್ರಕರಣಗಳಿವೆ. 24 ಗ್ರಾಪಂಗಳು ಸಂಪೂರ್ಣವಾಗಿ ಕೊರೊನಾ ಮುಕ್ತವಾಗಿವೆ.

ಫಲಿಸಿದ ಸೀಲ್ ಡೌನ್ ಅಸ್ತ್ರ:
ಕೊರೊನಾ ತಡೆಗೆ ಸೀಲ್ ಡೌನ್ ಅಸ್ತ್ರ ಫಲಕೊಟ್ಟಿದ್ದು, ಗ್ರಾಮೀಣ ಭಾಗಗಳಲ್ಲಿ ವ್ಯಾಪಿಸಿದ್ದ ಸೋಂಕು ನಿಯಂತ್ರಿಸಲು ಗ್ರಾಮ ಪಂಚಾಯಿತಿಗಳನ್ನು ಸೀಲ್ ಡೌನ್ ಮಾಡುವ ನಿರ್ಧಾರ ಯಶಸ್ವಿಯಾಗಿದೆ.

ಜಿಲ್ಲಾ ಪಂಚಾಯತ್ ಮತ್ತು ಆರೋಗ್ಯ ಇಲಾಖೆಯ ಬೆಂಬಲದೊಂದಿಗೆ 50ಕ್ಕೂ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳಿರುವ ಗ್ರಾಪಂಗಳನ್ನು ಸೀಲ್ ಡೌನ್ ಮಾಡಲು ಗ್ರಾಮ ಮಟ್ಟದಲ್ಲಿ ರೂಪುಗೊಂಡ ಕಾರ್ಯಪಡೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿತು. ಇದರ ಪರಿಣಾಮವಾಗಿ ಹಂತ ಹಂತವಾಗಿ ಗ್ರಾಪಂಗಳು ಕೊರೊನಾ ಕಪಿಮುಷ್ಠಿಯಿಂದ ಹೊರಬಂದಿತು.