ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಅಧೋಕ್ಷಜ ಮಠದ 32ನೇ ಸ್ವಾಮೀಜಿಗಳಾದ ಮಹಾಸಂತ ಶ್ರೀ ತೀವ್ರ ಅನಾರೋಗ್ಯದಿಂದ ಭಾನುವಾರ ಬೆಳಿಗ್ಗೆ ಹರಿಪಾದವನ್ನು ಸೇರಿದರು.
ಉಡುಪಿಯ ಅಷ್ಟಮಠಗಳ ಯತಿ ಪರಂಪರೆಯಲ್ಲಿ ಅತೀ ಹಿರಿಯ ಯತಿಯಾಗಿರುವ ವಿಶ್ವೇಶ ತೀರ್ಥರಿಗೆ 89 ವರ್ಷ ವಯಸ್ಸಾಗಿತ್ತು. ಶ್ರೀಗಳ ನಿರ್ಗಮನದೊಂದಿಗೆ ಸುದೀರ್ಘ ಇತಿಹಾಸವನ್ನು ಹೊಂದಿರುವ ಉಡುಪಿ ಅಷ್ಟಮಠಗಳ ಯತಿಪರಂಪರೆಯಲ್ಲಿನ ಮಹಾನ್ ಕೊಂಡಿಯೊಂದು ಕಳಚಿಬಿದ್ದಂತಾಗಿದೆ.
ಪೇಜಾವರ ಶ್ರೀಗಳನ್ನು ನ್ಯುಮೇನಿಯ (ಶ್ವಾಸಕೋಶ ಉಸಿರಾಟ ಸಮಸ್ಯೆ)ಯಿಂದಾಗಿ ಡಿ.20 ಶುಕ್ರವಾರ ಮುಂಜಾನೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ಶ್ರೀಗಳಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತಿದ್ದರು. ಕಳೆದ ಎಂಟು ದಿನಗಳ ನಡುವೆ ಆರೋಗ್ಯ ತುಸು ಚೇತರಿಕೆ ಕಂಡಿದ್ದರೂ ಕೃತಕ ಉಸಿರಾಟ ಮೂಲಕ ಗಂಭೀರ ಸ್ಥಿತಿಯಲ್ಲೆ ಚಿಕಿತ್ಸೆ ಮುಂದುವರೆಸಲಾಗಿತ್ತು.
ಶುಕ್ರವಾರ ಮತ್ತು ಶನಿವಾರ ಶ್ರೀಗಳ ದೇಹ ಸ್ಥಿತಿ ಚಿಂತಾಜನಕವಾಗಿತ್ತು. ಶನಿವಾರ ಸಾಯಂಕಾಲ ಮಿದುಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ವೈದ್ಯರು ತಿಳಿಸಿದ್ದರು. ಪೇಜಾವರ ಕಿರಿಯ ಶ್ರೀಗಳು ಗುರುಗಳ ಆರೋಗ್ಯ ಸುಧಾರಣೆ ಕಂಡಿಲ್ಲ. ಅವರ ಇಚ್ಛೆಯಂತೆ ಮಠಕ್ಕೆ ಕರೆದುಕೊಂಡು ಹೋಗುವುದಾಗಿ ನಿನ್ನೆ ತಿಳಿಸಿದ್ದರು. ಅದರಂತೆ ಭಾನುವರ ಬೆಳಗ್ಗೆ 6:55 ಗಂಟೆಗೆ ತಜ್ಞ ವೈದ್ಯಕೀಯ ತಂಡ, ಬಿಗು ಪೊಲೀಸ್ ಭದ್ರತೆಯಲ್ಲಿ ಶ್ರೀಗಳನ್ನು ಮಣಿಪಾಲದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಪೇಜಾವರ ಮಠಕ್ಕೆ ಕರೆದೊಯ್ಯಲಾಯಿತು. ಮಠಕ್ಕೆ ಕರೆದೊಯ್ಯಲಾದ ಕೆಲವೇ ಸಂದರ್ಭದಲ್ಲಿ ಶ್ರೀಗಳು ಕೊನೆಯುಸಿರೆಳೆದರು.
10ಗಂಟೆಗೆ ಅಂತಿಮ ದರ್ಶನ:
ಶ್ರೀಗಳ ಅಂತಿಮ ದರ್ಶನದ ವ್ಯವಸ್ಥೆಯನ್ನು ಬೆಳಿಗ್ಗೆ 10 ಗಂಟೆಗೆ ಅಜ್ಜರಕಾಡು ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅನಂತರ ಅಲ್ಲಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ತೆರಳಿ ಅಲ್ಲಿ ಸಂಜೆ 4 ಗಂಟೆಗೆ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ತದನಂತರ ಬೆಂಗಳೂರಿನ ವಿದ್ಯಾಪೀಠದಲ್ಲಿ ಬೃಂದಾವನ ವಿಧಿವಿಧಾನ ಕಾರ್ಯ ನಡೆಯಲಿದೆ.