ಉಡುಪಿ: ನಂದಿಕೂರಿನ ಕಾರ್ಕಳ–ಪಡುಬಿದ್ರಿ ಬಸ್ ನಿಲ್ದಾಣದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದಾರೆ.
ಮೃತರನ್ನು ಮಂಜುನಾಥ ಬೈಲಪ್ಪ ಮುರಗಾಲಿ (21) ಎಂದು ಗುರುತಿಸಲಾಗಿದೆ. ಇವರು ಕಾರ್ಕಳ ಕಡೆಯಿಂದ ಸುರತ್ಕಲ್ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
ರಾತ್ರಿ ವೇಳೆ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಪಾರ್ಕಿಂಗ್ ಲೈಟ್ ಅಥವಾ ಇಂಡಿಕೇಟರ್ ಅಳವಡಿಸದೆ, ಇತರೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ ಎನ್ನಲಾಗಿದೆ. ಇದರಿಂದ ಕತ್ತಲಿನಲ್ಲಿ ಲಾರಿ ಗಮನಕ್ಕೆ ಬಾರದೆ ಸ್ಕೂಟರ್ ಹಿಂಭಾಗಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ.
ಮೃತ ಮಂಜುನಾಥ ಅವರು ಮೂಲತಃ ರಾಯದುರ್ಗದವರಾಗಿದ್ದು, ಸುರತ್ಕಲ್‌ನ ಕೋಡಿಕರೆ ಪರಿಸರದಲ್ಲಿ ವಾಸವಾಗಿದ್ದರು. ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಅವರು, ಒಂದು ವರ್ಷದ ಹಿಂದೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂಬರುವ ನವೆಂಬರ್‌ನಲ್ಲಿ ಅವರ ವಿವಾಹ ನಡೆಯಬೇಕಿತ್ತು ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.















