ಉಡುಪಿ: ರಸ್ತೆ ಬದಿಯ ಕಾಂಪೌಂಡ್‌ಗೆ ಸ್ಕೂಟರ್ ಡಿಕ್ಕಿ; ಮಹಿಳೆ ಮೃತ್ಯು, ಪುತ್ರ ಗಂಭೀರ

ಉಡುಪಿ: ಸ್ಕೂಟರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿಯ ನಿಟ್ಟೂರು ಸಮೀಪ ಶುಕ್ರವಾರ ಸಂಜೆ ಸಂಭವಿಸಿದೆ.ಘಟನೆಯಲ್ಲಿ ಮಹಿಳೆಯ ಪುತ್ರ ಗಂಭೀರ ಗಾಯಗೊಂಡಿದ್ದಾರೆ.

ಮೃತರನ್ನು ಕಟಪಾಡಿ ಮೂಲದ ಹೆಲೆನ್ ಸೋನ್ಸ್ (50) ಎಂದು ಗುರುತಿಸಲಾಗಿದೆ.

ಸ್ಕೂಟರ್ ಚಲಾಯಿಸುತ್ತಿದ್ದ ಅವರ ಪುತ್ರ ಶೆರ್ವಿನ್ (20) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ತಾಯಿ ಮತ್ತು ಮಗ ಚಲಿಸುತ್ತಿದ್ದ ಸ್ಕೂಟರ್ ನಿಟ್ಟೂರು ರಸ್ತೆ ಬದಿಯಲ್ಲಿರುವ ಬಬ್ಬುಸ್ವಾಮಿ ದೈವಸ್ಥಾನದ ಕಾಂಪೌಂಡ್ ಗೋಡೆಗೆ ವೇಗವಾಗಿ ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ಸ್ಕೂಟರ್‌ನ ಹಿಂಬದಿ ಕುಳಿತಿದ್ದ ಹೆಲೆನ್ ಅವರಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.