ಉಡುಪಿ:ರಾ.ಹೆ. 169 ಎ ರ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಕಾರ್ಕಳದಲ್ಲಿ ಹಾದುಹೋಗುವ 169 ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದರ ಜೊತೆಗೆ ಭೂ ಮಾಲೀಕರಿಗೆ ಪರಿಹಾರದ ಹಣವನ್ನು ವೈಜ್ಞಾನಿಕವಾಗಿ ಮೌಲ್ಯವನ್ನು ನಿಗಧಿಪಡಿಸಿ ನೀಡಬೇಕೆಂದು ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಕಳ, ಬಜಗೋಳಿ, ಮಾಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಮತ್ತು ಭೂ ಸ್ವಾಧೀನ ಪರಿಹಾರ ಪಾವತಿಗೆ ಸಂಬಂಧಿಸಿದಂತೆ ಚರ್ಚಿಸುವ ಕುರಿತು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ 169 ಎ ಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಭೂ ಸ್ವಾಧೀನ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಅಲ್ಲಿನ ಸ್ಥಳೀಯ ಜನರು ಅನೇಕ ವರ್ಷಗಳಿಂದ ತಾವು ವಾಸವಿರುವ ಮನೆ ಹಾಗೂ ಕೃಷಿ ಭೂಮಿಯನ್ನು ರಸ್ತೆ ಅಭಿವೃದ್ಧಿ ಕಾಮಗಾರಿಗೆ ನೀಡುವ ಅಗತ್ಯತೆ ಉಂಟಾಗಿದೆ.ಅವರುಗಳಿಗೆ ಪ್ರಸ್ತುತ ಮಾರುಕಟ್ಟೆ ಅನುಗುಣವಾಗಿ ಪರಿಹಾರದ ಹಣವನ್ನು ನೀಡಿದ್ದಲ್ಲಿ ಅವರು ಭವಿಷ್ಯ ಜೀವನ ರೂಪಿಸಿಕೊಳ್ಳಲು ಅನುಕೂಲವಾಗಲಿದೆ ಇದಕ್ಕೆ ಒತ್ತು ನೀಡಬೇಕು ಎಂದರು.

ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳುವುದರೊಂದಿಗೆ ತ್ವರಿತವಾಗಿ ಮುಗಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.

ಮಲ್ಪೆ – ಕರಾವಳಿ ಜಂಕ್ಷನ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಭೂಮಿಯನ್ನು ಭೂ ಸ್ವಾಧೀನ ಗೊಳಿಸುವ ಪ್ರಕ್ರಿಯೆಯನ್ನು
ಚುರುಕುಗೊಳಿಸುವುದರೊಂದಿಗೆ ಪೂರ್ಣಗೊಳಿಸಿ, ಹೆದ್ದಾರಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಒಳಪಡುವ ಮನೆ, ಕೃಷಿ ಜಮೀನು ಸೇರಿದಂತೆ ಮತ್ತಿತರ ಸ್ವತ್ತುಗಳನ್ನು
ಅಧಿಕಾರಿಗಳು ನಿಖರವಾಗಿ ಪರಿವೀಕ್ಷಣೆ ಮಾಡಿ, ನೈಜತೆಗೆ ಅನುಗುಣವಾಗಿ ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ನಿಗಧಿಪಡಿಸಲು ಸೂಚನೆ ನೀಡಿದರು.

ಶಾಸಕ ಸುನಿಲ್ ಕುಮಾರ್ ಮಾತನಾಡಿ, ಭೂ ಸ್ವಾಧೀನಕ್ಕೆ ಒಳಗಾಗಿರುವ ಮನೆಯ ಅಥವಾ ಭೂಮಿಯ ಮಾಲೀಕರಿಗೆ ಗರಿಷ್ಠ ಪ್ರಮಾಣದ ಪರಿಹಾರದ ಹಣವನ್ನು ಒದಗಿಸಬೇಕು. ರಾಷ್ಟ್ರೀಯ ಹೆದ್ದಾರಿ 169 ಎ ಗೆ ನೆರೆಯ ಜಿಲ್ಲೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ನೀಡಿರುವ ಪರಿಹಾರದ ಹಣವು ಹೆಚ್ಚು ಇದೆ.ಒಂದೇ ರಸ್ತೆಗೆ ಭೂ ಸ್ವಾಧೀನದ ಪರಿಹಾರದ ಹಣ ವ್ಯತ್ಯಾಸದಿಂದ ಭೂ ಮಾಲೀಕರಿಗೆ ಗೊಂದಲದ ವಾತಾವರಣ ಉಂಟಾಗಿದೆ. ಅಧಿಕಾರಿಗಳು ಕಾನೂನಿನ ಅನ್ವಯ ಪರಿಹಾರದ ಮೊತ್ತವನ್ನು ನಿಗಧಿಗೊಳಿಸಿ, ನೀಡಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಡಿ.ಎಫ್.ಓ ರುಥ್ರೇನ್ ಪಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಸಹಾಯಕ ಕಮೀಷನರ್ ರಶ್ಮಿ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಹಶೀಲ್ದಾರರು, ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಅಭಿಯಂತರರುಗಳು, ಗುತ್ತಿಗೆದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.