ಮೌಲಾನಾ ಅಬುಲ್‌ ಕಲಾಂ ಆಜಾದ್ ಕೋಮು ಸಾಮರಸ್ಯದ ಪ್ರತೀಕ:ಡಾ. ರಾಮದಾಸ ಪ್ರಭು

ಉಡುಪಿ: ಮೌಲಾನಾ ಅಬುಲ್‌ ಕಲಾಂ ಆಜಾದರು ಭಾರತದ ಸೃಜನಶೀಲ ಕಾಲಖಂಡವೊಂದರ ಕೋಮು ಸಾಮರಸ್ಯದ ಪ್ರತೀಕ. ಅವರು ಈ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣದಲ್ಲಿ ಪ್ರಜಾಪ್ರಭುತ್ವವಾದಿ ಮತನಿರಪೇಕ್ಷ ಮೌಲ್ಯಗಳಿಗೆ ಹಾಗೂ ಸ್ವಾಯತ್ತತೆಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಉಡುಪಿ ಡಾ. ಜಿ. ಶಂಕರ್‌ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ಪ್ರಾಧ್ಯಾಪಕ ಡಾ. ರಾಮದಾಸ ಪ್ರಭು
ಹೇಳಿದರು.

ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಪ್ರಯುಕ್ತ ಕುಂಜಿಬೆಟ್ಟು ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವ ಮೌಲಾನಾ ಅಬುಲ್‌ ಕಲಾಂ ಆಜಾದರ ಜೀವನ ಸಾಧನೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಳದಲ್ಲಿ ಧಾರ್ಮಿಕರು, ಆಧ್ಯಾತ್ಮವಾದಿಗಳೂ ಆದ ಗಾಂಧಿ ಹಾಗೂ ಆಜಾದರು ದೇಶ ವಿಭಜನೆಯನ್ನು ವಿರೋಧಿಸಿದರೆ, ಪಾಶ್ಚಾತ್ಯೀಕರಣಗೊಂಡ ಧಾರ್ಮಿಕ ನಿಷ್ಠೆಯಿಲ್ಲದ ಮಂದಿ ದೇಶ ವಿಭಜನೆಯನ್ನು ಬೆಂಬಲಿಸಿದರು. ಸ್ವತಂತ್ರ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಗೆ ಆರಂಭದ ದಿನಗಳಲ್ಲಿ ಭದ್ರ ಬುನಾದಿ ಕಲ್ಪಿಸಿದ ಆಜಾದರನ್ನು ನೆನೆಯುವುದು ಅರ್ಥಪೂರ್ಣ. ಅವರು ಶಿಕ್ಷಣಕ್ಕೆ ನೀಡಿದ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದರು.

ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಪ್ರೊ. ಮುರಳೀಧರ ಉಪಾಧ್ಯ ಮಾತನಾಡಿದರು. ವಿದ್ಯಾರ್ಥಿ ಶಿಕ್ಷಕರು ಸಾಮಾಜಿಕ, ಶೈಕ್ಷಣಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿಕೊಳ್ಳುವುದು ಅನಿವಾರ್ಯ ಎಂದರು. ಉಪನ್ಯಾಸಕಿ ಕೆ. ರೂಪಾ ಸ್ವಾಗತಿಸಿದರು. ಎಚ್‌. ಉಷಾ ವಂದಿಸಿದರು.  ಮಮತಾ ಸಾಮಂತ್‌ ಕಾರ್ಯಕ್ರಮ ನಿರೂಪಿಸಿದರು.