ಉಡುಪಿ: ಹಿಂಸೆ, ದ್ವೇಷ, ಭಯೋತ್ಪಾದನೆ ಹಾಗೂ ಮನುಷ್ಯ ಪ್ರೇರಿತ ವೈಚಾರಿಕತೆಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ. ಆದ್ದರಿಂದ ಎಲ್ಲ ಧರ್ಮಗಳು ಸೇರಿ ಇಂತಹ
ಸಮಸ್ಯೆಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದು ಹೂಡೆ ಮಹಮ್ಮದೀಯ ಎಜುಕೇಶನಲ್ ಟ್ರಸ್ಟ್ನ ಉಪಾಧ್ಯಕ್ಷ ಮಹಮ್ಮದ್ ಇದ್ರಿಸ್ ಹೂಡೆ ಹೇಳಿದರು.
ಸೌಹಾರ್ದ ಸಮಿತಿ, ಕೆಥೊಲಿಕ್ ಸಭಾ ಉಡುಪಿ ಘಟಕ, ಶೋಕಮಾತಾ ಇಗರ್ಜಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಸರ್ವ ಧರ್ಮ ಈದ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂಸೆ, ದ್ವೇಷ, ನರಮೇಧ, ಭಯೋತ್ಪಾದನೆಯನ್ನು ಎಲ್ಲ ಧರ್ಮಗಳು ಕೂಡ ಸಂಪೂರ್ಣವಾಗಿ ನಿರಾಕರಿಸುತ್ತವೆ. ಆದರೆ ಇಂತಹ ವಿಚಾರಗಳಿಗೆ ಕುಮ್ಮಕ್ಕು ನೀಡುವ ಕೆಲಸ ಆಗುತ್ತಿದ್ದರೆ, ಅದು ಧರ್ಮದಿಂದ ಅಲ್ಲ. ಅದು ಧರ್ಮದ ಹೆಸರಿನಲ್ಲಿ ಕೆಲ ಸಮಾಜಘಾತುಕ ಶಕ್ತಿಗಳು ಮಾಡುವ ಕೃತ್ಯಗಳಾಗಿವೆ. ಇಂತಹ ವಿಧ್ವಂಸಕ ಕೃತಗಳನ್ನು ತೀವ್ರವಾಗಿ\ ಖಂಡಿಸುವುದೇ ಮನುಷ್ಯ ಧರ್ಮ ಎಂದರು.
ಉಡುಪಿ ಧರ್ಮಪ್ರಾಂತ್ಯದ ಸಂಪರ್ಕ ಸಾಧನ ಕೇಂದ್ರದ ನಿರ್ದೇಶಕ ಚೇತನ್ ಲೋಬೊ ಮಾತನಾಡಿದರು.
ಉಡುಪಿ ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ ಅಧ್ಯಕ್ಷತೆ ವಹಿಸಿದ್ದರು. ಇಂದ್ರಾಳಿ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸೌಹಾರ್ದ ಸಮಿತಿಯ
ಸಂಚಾಲಕ ಮೈಕಲ್ ಡಿಸೋಜ ಸ್ವಾಗತಿಸಿದರು. ಸದಸ್ಯ ಮಹಮ್ಮದ್ ಮೌಲಾ ವಂದಿಸಿದರು.
ಸಂಯೋಜಕ ಅಲ್ಫೊನ್ಸ್ ಡಿಕೋಸ್ಟ ಕಾರ್ಯಕ್ರಮ ನಿರೂಪಿಸಿದರು.












