ಜಿಲ್ಲೆಯಲ್ಲಿ ಅಗತ್ಯ ವಸ್ತು ಕೊರತೆಯಾಗದಂತೆ ಎಲ್ಲಾ ಕ್ರಮ- ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ : ಕೊರೋನಾ ಕಾರಣದಿಂದ ಜಿಲ್ಲೆಯಲ್ಲಿ ಅಗತ್ಯ ದಿನಸಿ ವಸ್ತುಗಳಾದ ಅಕ್ಕಿ, ತೆಂಗಿನ ಎಣ್ಣೆ ಪೂರೈಕೆ ಮಾಡುವ ರೈಸ್ ಮಿಲ್ ಮತ್ತು ಎಣ್ಣೆ ಮಿಲ್‍ಗಳ ಮಾಲೀಕರು ತಕ್ಷಣದಿಂದಲೇ ರೈಸ್ ಮಿಲ್ ಗಳನ್ನು ತೆಗೆದು ಎಂದಿನಂತೆ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದ್ದು,ಜಿಲ್ಲೆಗೆ ಹೊರ ಜಿಲ್ಲೆಯಿಂದ ಪೂರೈಕೆಯಾಗುವ ಸಾಮಗ್ರಿಗಳ ವಾಹನಗಳಿಗೆ ಸಹ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲವಾಗಿದ್ದು, ದಿನಸಿ ವಸ್ತುಗಳ ಕೊರತೆ ಕುರಿತಂತೆ ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವ ಅಗ್ಯವಿಲ್ಲ, ದಿನಸಿ ವಸ್ತುಗಳ ಕೊರತೆಯಾಗದಂತೆ ಎಲ್ಲಾ ಅಗ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಅವರು ಸೋಮವಾರ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ದಿನಸಿ ವಸ್ತು ಪೂರೈಕೆ ಮಾಡುವ ಸಗಟು ವಾಹನಗಳನ್ನು ಎಲ್ಲೂ ತಡೆಹಿಡಿದಿಲ್ಲ, ದಿನಸಿ ಸಾಗಾಟ ವಾಹನಗಳ ಸಂಚಾರವನ್ನು ರಾಜ್ಯದ ಯಾವುದೇ ಜಿಲ್ಲೆಯಲ್ಲಿ ತಡೆಯದಂತೆ ಆದೇಶವಿದೆ, ರಖಂ ಮಾರಾಟಗಾರರು ತಮ್ಮ ಅಂಗಡಿಗಳನ್ನು ತೆರೆದು ಚಿಲ್ಲರೆ ಮಾರಾಟಗಾರರಿಗೆ ವಿತರಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ದಿನಸಿ ವಸ್ತುಗಳ ಕೃತಕ ಅಭಾವ ಸೃಷ್ಠಿಸುವ ಮತ್ತು ಅನಗತ್ಯವಾಗಿ ದಾಸ್ತಾನು ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು, ರೈತರಿಂದ ಅಕ್ಕಿ, ಎಣ್ಣೆ ತಯಾರಿಕಾ ಕಚ್ಛಾವಸ್ತುಗಳಾದ ಭತ್ತ ಮತ್ತು ತೆಂಗಿನಕಾಯಿ ಖರೀದಿಸಲು ಮಿಲ್ ಮಾಲೀಕರಿಗೆ  ಅನುಮತಿ ನೀಡಲಾಗಿದೆ, ಜಿಲ್ಲೆಯಲ್ಲಿ ರೈತರು ಬೆಳೆದಿರುವ ಕಲ್ಲಂಗಡಿ ಹಣ್ಣು ಹಾಳಾಗದಂತೆ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿಗೆ ವ್ಯವಸ್ಥೆ ಮಾಡುವಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ದಿನಸಿ ವಸ್ತುಗಳ ಖರೀದಿಗಾಗಿ ಬೆಳಗ್ಗೆ 7 ರಿಂದ 11 ರ ವರೆಗೆ ಸಮಯ ನಿಗಧಿಪಡಿಸಿದ್ದು, ಸಾರ್ವಜನಿಕರು ಪ್ರತೀ ದಿನ ಮನೆಯಿಂದ ಅನಗತ್ಯ ಹೊರಬಂದು ವಸ್ತುಗಳನ್ನು ಖರೀದಿಸದೇ ಅಗತ್ಯವಿದ್ದಾಗ ಮಾತ್ರ , ಸಾಧ್ಯವಾದಲ್ಲಿ ವಾರದಲ್ಲಿ ಒಮ್ಮೆ ವಸ್ತುಗಳನ್ನು ಖರೀದಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

 ಎಲ್ಲರಿಗೂ ಮಾಸ್ಕ್ ಅಗತ್ಯವಿಲ್ಲ:

ಜಿಲ್ಲೆಯಲ್ಲಿ ಮಾಸ್ಕ್ ಗಳ ಕೊರತೆ ಬಗ್ಗೆ ಮಾತನಾಡಿ, ಮಾಸ್ಕ್ ಧರಿಸುವುದು ಪ್ರತಿಯೊಬ್ಬರಿಗೂ ಅಗತ್ಯವಿಲ್ಲ, ಯಾರಾದರೂ ಜ್ವರ, ಕೆಮ್ಮು, ಶೀತದಿಂದ ಬಳಲುತ್ತಿದ್ದಲ್ಲಿ ಮಾತ್ರ ಮಾಸ್ಕ್ ಧರಸಿ ಓಡಾಡುವಂತೆ ತಿಳಿಸಿದ ಅವರು, ಆರೋಗ್ಯದಿಂದಿರುವ ವ್ಯಕ್ತಿಗಳು ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರು, ಈ ಕುರಿತಂತೆ ಜಿಲ್ಲೆಯ ಎಲ್ಲಾ ಪೋಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದು, ಸಾರ್ವಜನಿಕರನ್ನು ಮಾಸ್ಕ್ ಧರಿಸುವಂತೆ ಒತ್ತಾಯ ಮಾಡದಂತೆ ಪೊಲೀಸರಿಗೆ ಸೂಚಿಸಲಾಗಿದೆ.  ಜಿಲ್ಲೆಗೆ ಅಗತ್ಯವಿರುವ ಮಾಸ್ಕ್ ಮತ್ತು ಸ್ಯಾನಿಟೈಸರ್ ಪೂರೈಕೆಗೆ ಇನ್ಫೋಸಿಸ್ ಸೇರಿದಂತೆ ಹಲವು ಸ್ಥಳಿಯ ದಾನಿಗಳು ನೆರವು ನೀಡುತ್ತಿದ್ದು, ಇಂದು ಮತ್ತು ನಾಳೆ ಸಾಕಷ್ಟು ಸಂಖ್ಯೆಯಲ್ಲಿ ಜಿಲ್ಲೆಗೆ ಸರಬರಾಜು ಆಗಲಿದೆ ಎಂದು  ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಪತ್ತೆ ಹಚ್ಚುವ ಲ್ಯಾಬ್ ಸ್ಥಾಪನೆಯ ಅಗತ್ಯತೆ ಕುರಿತಂತೆ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿಯರೊಂದಿಗೆ ಮನವಿ ಮಾಡಿದ್ದು, ಇದಕ್ಕೆ ಒಪ್ಪಿಗೆ ದೊರೆತಿದೆ ಎಂದ ಜಿಲ್ಲಾಧಿಕಾರಿಗಳು , ಜಿಲ್ಲೆಯ ವಲಸೆ ಕಾರ್ಮಿಕರಿಗೆ ಸಹಾಯ ನೀಡಲು ಗಂಜಿ ಕೇಂದ್ರ ತೆರೆಯಲಾಗಿದ್ದು, ದಾನಿಗಳ ನೆರವಿನಿಂದ ಆಹಾರದ ಕಿಟ್ ಸಹ ನೀಡಲಾಗುತ್ತಿದ್ದು, ಅಗತ್ಯ ಬಿದ್ದಲ್ಲಿ ಜಿಲ್ಲೆಯ ದೇವಾಲಯಗಳಿಂದ ಅಗತ್ಯ ನೆರವು ನೀಡಲಾಗುವುದು. ಮಲ್ಪೆ ಬಂದಿರಿನಲ್ಲಿರುವ ಕಾರ್ಮಿಕರಿಗೆ ಅಗತ್ಯ ಊಟ ಮತ್ತು ವಸತಿ ಕಲ್ಪಿಸುವುದು ಹಾಗೂ ಅವರ ಊರಿಗೆ ತಲುಪಿಸುವ ಜವಾಬ್ದಾರಿ ಸಂಬಂದಪಟ್ಟ ಬೋಟುಗಳ ಮಾಲೀಕರದ್ದೇ ಆಗಿದ್ದು, ತಪ್ಪಿದಲ್ಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರು ವಾಸವಿರುವ ಬಾಡಿಗೆ ಮನೆಯ ಮಾಲೀಕರು , ಬಾಡಿಗೆ ನೀಡುವಂತೆ ಒತ್ತಾಯ ಮಾಡದಂತೆ ಹಾಗೂ ಮುಂದಿನ 2 ತಿಂಗಳು ಅವರಿಂದ ಬಾಡಿಗೆ ಪಡೆಯದಂತೆ ಮತ್ತು ಅವರನ್ನು ಮನೆಯಿಂದ ಖಾಲಿ ಮಾಡಿಸದಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್ ಮತ್ತಿತರರು ಉಪಸ್ಥಿತರಿದ್ದರು.