ಉಡುಪಿ: ಪತ್ನಿ-ಅತ್ತೆ ಕೊಲೆ ಪ್ರಕರಣ; ಪತಿ ದೋಷಿ

ಉಡುಪಿ: ಕಳೆದ ಆರು ವರ್ಷಗಳ ಹಿಂದೆ ಉಡುಪಿಯ ಜನತೆಯನ್ನು ಬೆಚ್ಚಿ ಬೀಳಿಸಿದ ನಗರದ ಚಿಟ್ಪಾಡಿ ಎಂಬಲ್ಲಿ ನಡೆದ ಪತ್ನಿ ಹಾಗೂ ಅತ್ತೆಯ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಆರೋಪಿ ಪತಿ ಸಂಜಯ ಕುಮಾರ್ ದತ್ತ ದೋಷಿಯೆಂದು ಬುಧವಾರ ಆದೇಶ ನೀಡಿದ್ದು, ಶಿಕ್ಷೆ ಪ್ರಮಾಣವನ್ನು ಫೆ. 15ರಂದು ಪ್ರಕಟಿಸಲಿದೆ.


ಉಡುಪಿ ಚಿಟ್ಪಾಡಿಯಲ್ಲಿ ನೆಲೆಸಿದ್ದ ಅಸ್ಸಾಂ ಮೂಲದ ಸಂಜಯಕುಮಾರ್ ದತ್ತ ಆರೋಪ ಸಾಬೀತಾಗಿದೆ.
ಘಟನೆ ವಿವರ: ಮೂಲತಃ ಅಸ್ಸಾಂ ನಿವಾಸಿಯಾಗಿದ್ದ ಸಂಜಯಕುಮಾರ್, ಕಳೆದ 20 ವರ್ಷಗಳಿಂದ ಉಡುಪಿ ಚಿಟ್ಪಾಡಿಯ ಕಸ್ತೂರ್ಬಾನಗರದಲ್ಲಿ ನೆಲೆಸಿದ್ದ. ಈತ ಮಂಗಳೂರು ಬೈಕಂಪಾಡಿ ಫ್ಯಾಕ್ಟರಿಯೊಂದರ ಮ್ಯಾನೇಜರ್ ಆಗಿದ್ದ. ಚಿಟ್ಪಾಡಿಯ ನಿವಾಸಿ ಅರ್ಚನಾ ಎಂಬಾಕೆಯನ್ನು ವಿವಾಹವಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದರು.

ದಿನ ಕಳೆದಂತೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿ ಗಂಡ ಹೆಂಡತಿಯ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಆದರೆ 2015ರ ಎಪ್ರಿಲ್ 30ರಂದು ರಾತ್ರಿ ಜಗಳ ತೀವ್ರ ವಿಕೋಪಕ್ಕೆ ತಿರುಗಿದ್ದು, ಪತಿ ಸಂಜಯ್ ಸಿಟ್ಟಿನ ಬರದಲ್ಲಿ ಕತ್ತಿಯನ್ನು ತೆಗೆದುಕೊಂಡು ಪತ್ನಿ ಅರ್ಚನಾಳನ್ನು ಕಡಿದಿದ್ದಾನೆ. ಹಾಗೆ ಅದನ್ನು ತಡೆಯಲು ಬಂದ ಅತ್ತೆ ನಿರ್ಮಲಾ ಅವರಿಗೂ ಕತ್ತಿಯಿಂದ ಹಲ್ಲೆ ನಡೆಸಿದ್ದನು. ಕತ್ತಿಯ ಹೊಡೆತಕ್ಕೆ ಅತ್ತೆ ಸ್ಥಳದಲ್ಲೇ ಉಸಿರು ಚೆಲ್ಲಿದರೆ, ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿ 2015ರ ಮೇ 1ರಂದು ಚಿಕಿತ್ಸೆಗೆ ಫಲಕಾರಿಯಾಗದೆ ಸಾವನ್ನಪಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಜಯ್ ನನ್ನು ಉಡುಪಿ ನಗರ ಠಾಣೆ ಪೊಲೀಸರು ಮೇ 5ರಂದು ಬಂಧಿಸಿದ್ದರು. ಅಂದಿನ ವೃತ್ತ ನಿರೀಕ್ಷಕ ಶ್ರೀಕಾಂತ್ ನಾಯ್ಕ್ ಕೋರ್ಟ್ ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು‌.

ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಜೆ.ಎನ್. ಸುಬ್ರಹ್ಮಣ್ಯ ಆರೋಪಿ ಪತಿ ಸಂಜಯ್‌ಕುಮಾರ್ ದತ್ತ ದೋಷಿ ಎಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದ ಮಂಡಿಸಿದರು.