ಉಡುಪಿಯ ಮೊದಲ ಕೊರೊನಾ ಸೋಂಕಿತ ಆಸ್ಪತ್ರೆಯಿಂದ ಡಿಸ್ಚಾರ್ಜ್: 14 ದಿನ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ

ಉಡುಪಿ: ಜಿಲ್ಲೆಯಲ್ಲಿ ಪ್ರಥಮವಾಗಿ ಕೊರೊನಾ ವೈರಸ್ (ಕೋವಿಡ್-19) ತುತ್ತಾದ ಮಣಿಪಾಲದ 34ರ ಹರೆಯದ ಯುವಕ ಸಂಪೂರ್ಣ ಗುಣಮುಖನಾಗಿದ್ದು, ಆತನನ್ನು ಇಂದು ರಾತ್ರಿ 9.10 ಸುಮಾರಿಗೆ ಉಡುಪಿಯ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಹೇಳಿದ್ದಾರೆ.
ಸೋಮವಾರ ಮತ್ತು ಬುಧವಾರ ಎರಡು ಬಾರಿ ಈತನ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಎರಡು ಮಾದರಿಗಳಲ್ಲಿ ನೆಗೆಟಿವ್ ಬಂದಿದ್ದು,  ಇದೀಗ ಆತ ಸೋಂಕಿನಿಂದ ಸಂಪೂರ್ಣ ಚೇತರಿಸಿ ಕೊಂಡಿರುವುದು ಖಚಿತವಾಗಿದೆ. ಹೀಗಾಗಿ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈತ ಬಿಡುಗಡೆ ಆದರೂ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಈತನು ಮಾರ್ಚ್ 18ರಂದು ದುಬೈನಿಂದ ಉಡುಪಿಗೆ ಬಂದಿದ್ದು, ಬಳಿಕ‌ ಈತನಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ಮಾರ್ಚ್ 23 ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಆ ವರದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಮಾ.29ರಂದು ಕೊರೊನಾ ಸೋಂಕು ಪತ್ತೆಯಾದ ಉಡುಪಿ ಆಸುಪಾಸಿನ ಇಬ್ಬರು ಯುವಕರ ಮೊದಲ ಮಾದರಿಗಳನ್ನು ನಿನ್ನೆ ಸಂಗ್ರಹಿಸಿ ಪರೀಕ್ಷೆಗೆ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರ ವರದಿ ನಾಳೆ ವೈದ್ಯ ಕೈ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಗಡಿಗಳು ಸಂಪೂರ್ಣ ಬಂದ್:

ಜಿಲ್ಲೆಯ ಗಡಿಗಳು ಸಂಪೂರ್ಣ ಬಂದ್ ಜಿಲ್ಲಾಡಳಿತ ಉಡುಪಿ ಜಿಲ್ಲೆಯ ನಾಲ್ಕೂ ಗಡಿಗಳನ್ನು ಸಂಪೂರ್ಣ ವಾಗಿ ಮುಚ್ಚಿದ್ದು, ಜಿಲ್ಲೆಯೊಂದಿಗೆ ಸಂಪರ್ಕ ಹೊಂದಿರುವ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಗಡಿಗಳನ್ನು ಬಂದ್ ಮಾಡಲಾಗಿದೆ. ಜಿಲ್ಲೆಯೊಳಗೆ ಯಾರಿಗೂ ಪ್ರವೇಶ ನೀಡಲಾಗುತ್ತಿಲ್ಲ. ಹಾಗೆಯೇ ಜಿಲ್ಲೆಯಿಂದ ಯಾರೂ ಹೊರಹೋಗುವಂತಿಲ್ಲ. ಹೊರಜಿಲ್ಲೆಗಳಲ್ಲಿರುವ ಜಿಲ್ಲೆಯ ಜನರು ಉಡುಪಿಗೆ ಬರಲು ತಯಾರಿ ನಡೆಸಿದ್ದಾರೆ, ಅದೇ ರೀತಿ ಜಿಲ್ಲೆಯಲ್ಲಿರುವ ಹೊರ ಜಿಲ್ಲೆಯ ಜನರು ಹೊರಡು ಸಿದ್ಧತೆ ನಡೆಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮುಂದಾಗಿದ್ದಾರೆ.