ಉಡುಪಿ: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ಇಂದು ತಮ್ಮ ರಾಜಕೀಯ ಎದುರಾಳಿ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ತಮ್ಮ ಮನೆಗೂ ಅವರನ್ನು ಆಹ್ವಾನಿಸಿ ಇಬ್ಬರೂ ಒಟ್ಟಿಗೆ ಉಪಾಹಾರ ಸೇವಿಸುವ ಮೂಲಕ ಹೊಸ ರಾಜಕೀಯ ಚರ್ಚೆ ಹುಟ್ಟುಹಾಕಿದ್ದಾರೆ.
ಪ್ರಮೋದ್ ಅವರು ಕಳೆದ ಮೂರ್ನಾಲ್ಕು ವರ್ಷಗಳಿಂದ ತಮ್ಮ ರಾಜಕೀಯ ಜೀವನದ ಬಗ್ಗೆ ಕಿಂಚಿತ್ತೂ ಸುಳಿವು ಬಿಟ್ಟುಕೊಡುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಕೊನೆ ಪಕ್ಷದಲ್ಲಿ ಕಾಂಗ್ರೆಸ್ ನಲ್ಲಿಯೇ ಸ್ಪರ್ಧಿಸಿ ರಘುಪತಿ ಭಟ್ ಎದುರು ಪರಾಭವಗೊಂಡಿದ್ದಿರು.
ಆದಾದ ಬಳಿಕ 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಳಿಯುವ ಮೂಲಕ ಹೊಸ ರಾಜಕೀಯ ಧಾಳ ಉರುಳಿಸಿದ್ದರು. ಆದರೆ ಅದರಲ್ಲಿ ಅವರು ಯಶಸ್ಸು ಕಾಣಲಿಲ್ಲ. ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು. ಆ ಬಳಿಕ ಕಳೆದು ಎರಡು ವರ್ಷಗಳಿಂದ ತಮ್ಮ ರಾಜಕೀಯ ಜೀವನದ ಬಗ್ಗೆ ಸಾಕಷ್ಟು ಸಸ್ಪೆನ್ಸ್ ಕಾಯ್ದುಕೊಂಡು ಬಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ಉಡುಪಿ ಕ್ಷೇತ್ರದಾದ್ಯಂತ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಹಡಿಲು ಭೂಮಿ ಕೃಷಿ ಕಾರ್ಯಕ್ರಮ ಭರದಿಂದ ನಡೆಯುತ್ತಿದೆ. ಹಾಗೆ ಇಂದು ಉಪ್ಪೂರಿನಲ್ಲಿ ನಡೆದ ಹಡಿಲು ಭೂಮಿ ನಾಟಿ ಕಾರ್ಯಕ್ಕೆ ತೆರಳಿದ ಪ್ರಮೋದ್ ಮಧ್ವರಾಜ್ , ಶಾಸಕ ರಘುಪತಿ ಭಟ್ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾದರು.
ಬಳಿಕ ಶಾಸಕರು ಪ್ರಮೋದ್ ಮಧ್ವರಾಜ್ ಮನೆಯ ಗೋಶಾಲೆಗೆ ಭೇಟಿ ನೀಡಿದ್ದಾರೆ. ಒಟ್ಟಿಗೆ ಉಪಾಹಾರ ಸೇವಿಸಿದ್ದಾರೆ. ಹಡಿಲು ಭೂಮಿ ಕೃಷಿ ಆಂದೋಲನದ ಬಗ್ಗೆ ಕಾಂಗ್ರೆಸ್ ನಾಯಕರು ಸಾಕಷ್ಟು ಟೀಕೆ ಮಾಡುತ್ತಿರುವ ಹೊತ್ತಿನಲ್ಲಿಯೇ ಪ್ರಮೋದ್ ಮಧ್ವರಾಜ್ ಖುದ್ದು ಭಾಗವಹಿಸಿ ಬೆಂಬಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು, ಕಾರ್ಯಕರ್ತರಲ್ಲಿಯೂ ಗೊಂದಲ ಸೃಷ್ಟಿಸಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗಲೇ ಈ ರೀತಿಯ ರಾಜಕೀಯ ಬೆಳವಣಿಗೆ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವುದಂತು ನಿಜ.