ಫಿಶ್ ಮಿಲ್ ಜಿ.ಎಸ್.ಟಿ.ರದ್ದು ವಿಚಾರ, ಮೀನುಗಾರರ ಪರವಾಗಿ ಧಾವಿಸುವಂತೆ ಶಾಸಕ ರಘುಪತಿ ಭಟ್ ಹೇಳಿಕೆ

ಉಡುಪಿ: ಮೀನುಗಾರರ ಸುಮಾರು 40%ರಷ್ಟು ಮೀನುಗಳು ಫಿಶ್ ಮಿಲ್ ಸೇರುತ್ತಿದ್ದುದು, ಮೀನುಗಾರರಿಗೆ ಆಸರೆಯಾಗಿತ್ತು. ಆದರೆ ಫಿಶ್ ಮಿಲ್’ಗೆ ಜಿ.ಎಸ್.ಟಿ.ಜಾರಿಯಾಗಿದ್ದರಿಂದ ಅದರ ಬೆಲೆ ಮೀನುಗಾರರ ಮೇಲೆ ಪ್ರಭಾವ ಬೀರಿತು.
ಇದರಿಂದಾಗಿ ಈವರೆಗೆ ಮೀನುಗಾರರಿಗೆ ಆಗಿರುವ ನಷ್ಟ ಭರಿಸಿ ಸಹಕಾರಿ ಆಗಬೇಕು ಹಾಗೂ ಈ ಹಿಂದಿನಂತೆ ಹೆಚ್ಚಿನ ಬೆಲೆ ನೀಡಿ ಮೀನು ಖರೀದಿಸಬೇಕು ಎಂದು ಶಾಸಕ‌ ಕೆ. ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೀನುಗಾರರಿಂದ ಖರೀದಿ ಮಾಡುವ ಮೀನುಗಳಲ್ಲಿ ಬೆಲೆ ಕಡಿಮೆ ಮಾಡಿ ಫಿಶ್ ಮಿಲ್’ಗಳು ಖರೀದಿಸುತ್ತಿದ್ದವು. ಇಷ್ಟು ಮಾತ್ರವಲ್ಲದೆ ಫಿಶ್ ಮಿಲ್ ಬಂದ್ ಮಾಡುತ್ತೇವೆ ಎಂದು ಮಾಲೀಕರು ಹೇಳಿದ್ದು, ಮೀನುಗಾರರಿಗೆ ನಷ್ಟ ಆಗುವ ಸಾಧ್ಯತೆ ನಿಚ್ಚಳವಾಗಿತ್ತು. ಇದನ್ನು ಅರಿತ ಮೀನುಗಾರರ ನಿಯೋಗ ಉಡುಪಿ ತನ್ನ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಹೀಗಾಗಿ ಸಂಸದೆ ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ಮೀನುಗಾರರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು.
ಅನಂತರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಕೂಡಾ ಮನವಿ ನೀಡಿದ್ದು, ಫಿಶ್ ಮಿಲ್ ಮೇಲೆ ವಿಧಿಸಿದ್ದ ಜಿ.ಎಸ್.ಟಿ.ಯನ್ನು ಸಂಪೂರ್ಣವಾಗಿ ರದ್ದು ಮಾಡಲಾಯಿತು.
ಮೀನುಗಾರರ ಪರವಾಗಿ ಫಿಶ್ ಮಿಲ್ ಮಾಲೀಕರ ಬಳಿ ದರ ಏರಿಸುವಂತೆ ಮನವಿ ಮಾಡಲಾಗಿದೆ. ಫಿಶ್ ಮಿಲ್ ಸಮಸ್ಯೆಗಳನ್ನು ಅರಿತುಕೊಂಡು ಮೀನುಗಾರರು ಹಾಗೂ ಸರ್ಕಾರ ನಿಮ್ಮ ಪರವಾಗಿ ಮನವಿ ಮಾಡಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡಿದೆ. ಈಗ ಮೀನುಗಾರರ ಕಷ್ಟಕ್ಕೆ ಫಿಶ್ ಮಿಲ್ ಮಾಲೀಕರು ಸ್ಪಂದಿಸಿ ಅವರಿಗೆ ನೆರವಾಗಬೇಕು ಎಂದು ಹೇಳಿದರು.