ಉಡುಪಿ: ಜಿಲ್ಲೆಯ ಎಸ್ಪಿಯಾಗಿದ್ದ ನಿಶಾ ಜೇಮ್ಸ್ ಅವರ ವರ್ಗಾವಣೆ ಸರ್ಕಾರದ ಸಹಜ ಪ್ರಕ್ರಿಯೆ. ಇದು ಮುಖ್ಯಮಂತ್ರಿ ನಿರ್ಧಾರದಂತೆ ನಡೆದಿರುವ ವರ್ಗಾವಣೆ. ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ ಎಂದು ಉಡುಪಿ ಶಾಸಕ ಕೆ. ರಘಪತಿ ಭಟ್ ಸ್ಪಷ್ಟಪಡಿಸಿದರು. ಎಸ್ಪಿ ನಿಶಾ ಜೇಮ್ಸ್ ವರ್ಗಾವಣೆಯಲ್ಲಿ ಉಡುಪಿ ಶಾಸಕರ ಕೈವಾಡವಿದೆ ಎಂಬ ಆರೋಪಗಳು ಕೇಳಿಬರುತ್ತಿದೆ ಎನ್ನುವ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಉಡುಪಿಯಲ್ಲಿ ಪರ್ಯಾಯ ಕೂಡ ಸಮೀಪಿಸುತ್ತಿದೆ. ಈ ಹಂತದಲ್ಲಿ ಜಿಲ್ಲೆಯ ಬಗ್ಗೆ ತಿಳಿದುಕೊಂಡಿರುವ ಅಧಿಕಾರಿ ಬಂದರೆ ಕಾನೂನು ಸುವ್ಯವಸ್ಥೆಯನ್ನು ಸುಲಭವಾಗಿ ನಿಭಾಯಿಸಬಹುದು. ಈ ನಿಟ್ಟಿನಲ್ಲಿ ಅನುಭವ ಇರುವ ಅಧಿಕಾರಿಯನ್ನೇ ನೀಡಿ ಎಂದು ಕೇಳಿಕೊಂಡಿದ್ದೇವು. ನಮ್ಮ ಅಪೇಕ್ಷೆಯಂತೆ ಸಿಎಂ ಉತ್ತಮ ಅಧಿಕಾರಿಯನ್ನು ಉಡುಪಿಗೆ
ನೀಡಿದ್ದಾರೆ ಎಂದರು.
ಎಸ್ಪಿ ವಿಷ್ಣುವರ್ಧನ್ ಒಳ್ಳೆಯ ಅಧಿಕಾರಿಯೆಂದು ವರ್ಗಾವಣೆ ಪ್ರಕ್ರಿಯೆ ಆರಂಭವಾಗುವ ಮೊದಲೇ ಸಿಎಂಗೆ ತಿಳಿಸಿದ್ದೇವು. ಅಲ್ಲದೆ, ಅವರು ಪ್ರಮೋದ್ ಮಧ್ವರಾಜ್ ಸಚಿವರಾಗಿದ್ದ ಸಂದರ್ಭದಲ್ಲಿ ಉಡುಪಿಯಲ್ಲಿ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಆಗ ಅವರು ಉತ್ತಮವಾಗಿ ಕೆಲಸ ಮಾಡಿದ್ದರು. ಅವರಿಗೆ ಜಿಲ್ಲೆಯ ಬಗ್ಗೆ ಒಳ್ಳೆಯ ಅನುಭವವೂ ಇದೆ ಎಂದು ತಿಳಿಸಿದರು.
ಎಸ್ಪಿ ವರ್ಗಾವಣೆ ಆಡಳಿತಾತ್ಮಕವಾದ ಪ್ರಕ್ರಿಯೆ. ಇದಕ್ಕೂ ಮರಳುಗಾರಿಕೆಗೂ ಸಂಬಂಧ ಇಲ್ಲ. ಹಿಂದಿನ ಎಸ್ಪಿ ಮರಳುಗಾರಿಕೆಗೆ ಯಾವುದೇ ತೊಂದರೆ ಮಾಡಿಲ್ಲ. ಪ್ರಮೋದ್ ಮಂತ್ರಿ ಆಗಿದ್ದಾಗಲೂ ಒಳ್ಳೆಯ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದರು. ಅದರಂತೆ ನಾವು ಕೂಡ ಉತ್ತಮ ಅಧಿಕಾರಿಯನ್ನು ನೇಮಕ ಮಾಡಿಕೊಂಡಿದ್ದೇವೆ ಎಂದು ಮಾಜಿ ಸಚಿವ ಪ್ರಮೋದ್‌ಗೆ
ಟಾಂಗ್ ನೀಡಿದರು.