ಉಡುಪಿ: ಓದುವವರ ಸಂಖ್ಯೆ ಕಮ್ಮಿಯಾಗಿದೆ. ಅದ್ರಲ್ಲೂ ಪುಸ್ತಕ ಕೊಂಡು ಓದುವವರಿಲ್ಲ ಅನ್ನೊ ಅಪವಾದ ಇದೆ.
ವಿದ್ಯಾರ್ಥಿಗಳಲ್ಲಿ ಆ ಹವ್ಯಾಸವೇ ಇಲ್ಲ ಎಂಬ ದೂರು ಎಲ್ಲೆಡೆ ಕೇಳಿ ಬರುತ್ತದೆ. ಅದನ್ನು ಸುಳ್ಳಾಗಿಸುವ ಮತ್ತು ಪುಸ್ತಕ ಸಂಸ್ಕೃತಿಯನ್ನು ಸೃಷ್ಟಿಸುವ ಸಲುವಾಗಿ ಉಡುಪಿಯ ಎಂ.ಜಿ.ಎಂ ಕಾಲೇಜು ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.
ಮಾರ್ಚ್ 5 ಮತ್ತು 6ರಂದು ಬೆಳಿಗ್ಗೆ 9 ರಿಂದ ರಾತ್ರಿ 8ರ ವರೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ‘ಎಂ.ಜಿ.ಎಂ ಪುಸ್ತಕೋತ್ಸವ’ವನ್ನು ಆಯೋಜಿಸಿದೆ.
ನವಕರ್ನಾಟಕ, ಮಣಿಪಾಲ್ ಯೂನಿವರ್ಸಲ್ ಪ್ರೆಸ್, ಭಾರತ್ ಬುಕ್ ಮಾರ್ಕ್, ಬಿಬ್ಲಿಯೋಸ್, ಸ್ಕೂಲ್ ಬುಕ್ ಕಂಪೆನಿ ಸೇರಿದಂತೆ ವಿವಿಧ ಮಳಿಗೆಗಳು ಲಭ್ಯವಿದ್ದು, ಆಸಕ್ತ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಶಾಲೆ, ಕಾಲೇಜುಗಳಿಗೆ, ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಪುಸ್ತಕಗಳು ಸಿಗಲಿವೆ.
ಪುಸ್ತಕ ದಾನಕ್ಕೆ ಅವಕಾಶ:
ಪುಸ್ತಕೋತ್ಸವದಲ್ಲಿ ಗ್ರಂಥಾಲಯ ಮತ್ತು ಪತ್ರಿಕೋದ್ಯಮ ವಿಭಾಗವು ವಿಶೇಷ ಮಳಿಗೆಯೊಂದನ್ನು ತೆರೆದಿಡಲಿದೆ. ಅಲ್ಲಿ ಯಾವುದೇ ಪುಸ್ತಕಗಳು ಸಿಗುವುದಿಲ್ಲ. ಬದಲಿಗೆ ನೀವು ಖರೀದಿಸಿದ ಯಾವುದೇ ಪುಸ್ತಕವನ್ನು ನಿಮ್ಮ ಹೆಸರಿನ ಜೊತೆಗೆ ದಾನ ಮಾಡಬಹುದು.
ದಾನ ಮಾಡಲು ಹೊಸ ಪುಸ್ತಕವೇ ಆಗಬೇಕೆಂದಿಲ್ಲ. ನೀವು ಈಗಾಗಲೇ ಕೊಂಡು ಓದಿರುವಂತದ್ದಾದರೂ ಪರವಾಗಿಲ್ಲ. ಹೀಗೆ ಒಟ್ಟಾದ ಪುಸ್ತಕಗಳನ್ನು ನಾವು ಉಡುಪಿಯ ಕನ್ನಡ ಶಾಲೆಗಳಿಗೆ ಹಂಚಲಿದ್ದೇವೆ. ಈ ಮೂಲಕ ಪ್ರಾಥಮಿಕ ವಿದ್ಯಾರ್ಥಿಗಳಿಂದಲೇ ಓದುವ ಹವ್ಯಾಸ ಬೆಳೆಸುವ ಪ್ರಯತ್ನವನ್ನು ಎಂಜಿಎಂ ಕಾಲೇಜು ಮಾಡುತ್ತಿದೆ ಎಂದು ಮುಖ್ಯ ಗ್ರಂಥಪಾಲಕ ಕಿಶೋರ್ ಎಚ್. ವಿ ಹೇಳಿದ್ದಾರೆ.