ಉಡುಪಿ: ಹಿಂದೂ ದೇವರ ಅವಹೇಳನ ಖಂಡಿಸಿ ನಾಳೆ (ಜ.11) ಜಿಲ್ಲೆಯ ಧಾರ್ಮಿಕ‌ ಕ್ಷೇತ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ

ಉಡುಪಿ: ಕರಾವಳಿಯಾದ್ಯಂತ ನಡೆಯುತ್ತಿರುವ ಹಿಂದೂ ದೇವರ ಅವಹೇಳನ, ಅಪಹಾಸ್ಯ ಹಾಗೂ ದೇವಸ್ಥಾನಗಳನ್ನು ಅಪವಿತ್ರಗೊಳಿಸಿ ವಿಕೃತಿ ಮೆರೆದಿರುವಂತಹ ಕೃತ್ಯಗಳನ್ನು ಖಂಡಿಸಿ ಜ.11 ರಂದು ಉಡುಪಿ ಜಿಲ್ಲೆಯಾದ್ಯಂತ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಸಾಮೂಹಿಕ ಪ್ರಾರ್ಥನೆ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷತ್ ಭಜರಂಗದಳದ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕರಾವಳಿ ಭಾಗದಲ್ಲಿ ಹಲವಾರು ಸಮಯಗಳಿಂದ ದೇವರ, ದೈವಗಳಿಗೆ ಅಪಹಾಸ್ಯ, ನಿಂದನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಚಿತ್ರಗಳನ್ನು ಬಿಡಿಸಿ ಹಂಚುವುದು. ದೇವರ ಕಾಣಿಕೆ ಡಬ್ಬಿಗಳಿಗೆ ಬೇಡದ ವಸ್ತುಗಳನ್ನು ಹಾಕಿ ಅಪವಿತ್ರಗೊಳಿಸುವಂತಹ ಕೃತ್ಯಗಳು ನಿರಂತರವಾಗಿ ಜಿಹಾದಿ ಮಾನಸಿಕತೆಯ ವ್ಯಕ್ತಿಗಳಿಂದ ನಡೆಯುತ್ತಿದೆ ಎಂದು ದೂರಿದರು. ಮೂರು ದಿನಗಳ ಹಿಂದೆ ವಿಟ್ಲ ಸಾಲೆತ್ತೂರಿನಲ್ಲಿ ಹಿಂದೂಗಳ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ವೇಷ ಹಾಕಿ ವಿಚಿತ್ರವಾಗಿ ಕುಣಿದು ವಿಕೃತ ಮೆರೆದ ಘಟನೆ ಅತ್ಯಂತ ಖಂಡನೀಯವಾದುದು. ಇದು ಸಮಸ್ತ ಹಿಂದೂಗಳ ಮನಸ್ಸಿಗೆ ನೋವನ್ನುಂಟು ಮಾಡಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಯಾಗಿದೆ. ಈ ಎಲ್ಲಾ ಕೃತ್ಯಗಳನ್ನು ಖಂಡಿಸಿ, ಇಂತಹ ಘಟನೆಗಳು ನಡೆಯಬಾರದು ಮತ್ತು ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕೆಂದು ದೈವ, ದೇವರುಗಳ ಮೊರೆ ಹೋಗಿದ್ದು, ಅದರಂತೆ ಈ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದರು.

ಉಡುಪಿಯ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಆನೆಗುಡ್ಡೆ , ಪೆರ್ಡೂರು ಅನಂತಪದ್ಮನಾಭ, ಕಾರ್ಕಳ ವೆಂಕಟರಮಣ ದೇವಸ್ಥಾನ ಮೊದಲಾದ ಪ್ರಮುಖ ದೇವಸ್ಥಾನಗಳಲ್ಲಿ ಪ್ರಾರ್ಥನೆ ಜರುಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಭಜರಂಗದಳ ಕರ್ನಾಟಕದ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್, ಭಜರಂಗದಳ ಉಡುಪಿ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ ಇದ್ದರು.