ರಾಜಕಾರಣಿಗಳು ತಮ್ಮ ಸಂಪತ್ತು ವೃದ್ದಿಸಲು ಗಮಹರಿಸಿರುವುದು‌ ದೇಶದ ಆರ್ಥಿಕ ಕುಸಿತಕ್ಕೆ ಕಾರಣ: ಕೋಟ್ಯಾರ್

ಉಡುಪಿ: ರಾಜಕಾರಣಿಗಳು ದೇಶದ ಆರ್ಥಿಕ ಸುಧಾರಣೆ ಮಾಡುವ ಬದಲು ತಮ್ಮ ಸಂಪತ್ತು ವೃದ್ಧಿಸುವ ಕಡೆಗೆ ಹೆಚ್ಚು ಗಮನಹರಿಸುತ್ತಿದ್ದು, ಇದೇ ಭಾರತದ ಇಂದಿನ ಆರ್ಥಿಕತೆಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮಾಸ್‌ ಇಂಡಿಯಾ ಎನ್‌ಜಿಓ ಕರ್ನಾಟಕ ಇದರ ಅಧ್ಯಕ್ಷ ಜಿ.ಎ. ಕೋಟ್ಯಾರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೇಶದ ಆರ್ಥಿಕತೆಯೂ ಶೇ. 50ರಷ್ಟು ಕುಸಿದಿದೆ. ಆದರೆ ಸರ್ಕಾರದ ಒತ್ತಡ ಹಾಗೂ ಬೆದರಿಕೆಯಿಂದ ಅರ್ಥಶಾಸ್ತ್ರಜ್ಞರು,
ಹಣಕಾಸಿನ ತಜ್ಞರು ಈ ಬಗ್ಗೆ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ತೆರಿಗೆ ಇಡೀ ಜಗತ್ತಿನಲ್ಲೇ ಅತ್ಯಂತ‌ ದುಬಾರಿಯಾಗಿದೆ. ಜಿಎಸ್‌ಟಿಯು ಮಧ್ಯಮ ವರ್ಗ, ಸಣ್ಣ ಕೈಗಾರಿಕೆ, ದೊಡ್ಡ ಉದ್ಯಮಗಳಿಗೆ ಹೊಡೆತ ಕೊಟ್ಟಿದೆ. ಹೂಡಿಕೆ ಕಡಿಮೆಯಾಗಿ, ವಸ್ತುಗಳಿಗೆ ಬೇಡಿಕೆ ಇಲ್ಲದ ಪರಿಣಾಮ ಇಂದು ನಿರುದ್ಯೋಗ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಂಡುಬರುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಹಣ ಹೂಡಿಕೆ, ಖರೀದಿ, ಕೃಷಿ ಉತ್ಪಾದನೆ ಕಡಿಮೆಯಾಗುತ್ತಿದ್ದು, ತೆರಿಗೆ, ನಿರುದ್ಯೋಗ ಸಮಸ್ಯೆ, ಬ್ಯಾಂಕ್‌ ವಂಚನೆ, ಸರ್ಕಾರಿ ವೆಚ್ಚಗಳು ತುಂಬಾ ಹೆಚ್ಚಾಗುತ್ತಿವೆ ಎಂದು ಅವರು ದೂರಿದರು.
ಮಾಸ್‌ ಇಂಡಿಯಾ ಸದಸ್ಯೆ ವೀಣಾ ದೀಪಕ್‌ ಮಾತನಾಡಿ, ಇಎಸ್‌ಐಯಲ್ಲಿ ಕ್ಲೈಮ್‌ ಆಗದೆ ಉಳಿದ 10 ಸಾವಿರ ಕೋಟಿ ರೂ.ಯನ್ನು ಕೇಂದ್ರ ಸರ್ಕಾರದ ಆಯುಷ್ಮಾನ್‌ ಯೋಜನೆಗೆ ಬಳಸಿಕೊಳ್ಳಲಾಗಿದೆ. ಈ ಯೋಜನೆಯಲ್ಲಿರುವುದು ಕಾರ್ಮಿಕರು ಪಾವತಿಸಿದ ಹಣವೇ ಹೊರತು ಸರ್ಕಾರದಲ್ಲ. ಇಎಸ್‌ಐಯಿಂದ ಹಣವನ್ನು ತೆಗೆಯುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು
ದೂರಿದರು.
ಜನಪ್ರತಿನಿಧಿಗಳಿಗೆ ಸರ್ಕಾರ ನೀಡುವ ಪಿಂಚಣಿ ವ್ಯವಸ್ಥೆಯನ್ನು ಕೈಬಿಡಬೇಕು. ಇದು ದೇಶದ ಆರ್ಥಿಕತೆಗೆ ದೊಡ್ಡ ಹೊರೆಯಾಗಿದೆ ಎಂದರು.
ಗೋಷ್ಠಿಯಲ್ಲಿ ಮಾಸ್‌ ಇಂಡಿಯಾ ಬ್ರಹ್ಮಾವರ ಅಧ್ಯಕ್ಷ ರಾಜೇಶ್‌ ಪೆರೇರಾ, ಮಣಿಪಾಲ ಸದಸ್ಯ ನರಸಿಂಹಮೂರ್ತಿ, ಜಯ ಪೂಜಾರಿ ಇದ್ದರು.