ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರಕ್ಕೆ ಮಂಜುನಾಥ ಭಂಡಾರಿ ಪತ್ರ

ಉಡುಪಿ: ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷವಾಗಿ ಕರಾವಳಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿ ಮತ್ತು ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆದಿದ್ದಾರೆ.

ಸಂಸ್ಕೃತಿಯ ಉತ್ತೇಜನದಲ್ಲಿ ಕರಾವಳಿ ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ದಿನಾಂಕ 10.01.2026 ರಂದು ನಡೆದ ಕರಾವಳಿ ಪ್ರವಾಸೋದ್ಯಮ ಮಹತ್ವದ ಮೈಲುಗಲ್ಲುಗಳ ಕುರಿತ ಕಾರ್ಯಕ್ರಮವು ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವದ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ರಾಜ್ಯದ ಪ್ರವಾಸೋದ್ಯಮವನ್ನು ಕರಾವಳಿ ಕರ್ನಾಟಕ, ಮೈಸೂರು ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಎಂಬ ಮೂರು ವಲಯಗಳಾಗಿ ರಚಿಸಿ, ಪ್ರತಿಯೊಂದು ವಲಯಕ್ಕೂ ಐಎಎಸ್ ದರ್ಜೆಯ ಅಧಿಕಾರಿಗಳನ್ನು ನೇಮಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಅನುಷ್ಠಾನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸುವುದು.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಯಂ ಉಪನಿರ್ದೇಶಕರ ಹುದ್ದೆಗಳನ್ನು ಹಾಗೂ ಅಗತ್ಯ ಸಿಬ್ಬಂದಿಯನ್ನು ಭರ್ತಿ ಮಾಡುವುದು.

ಸುಬ್ರಹ್ಮಣ್ಯ-ಧರ್ಮಸ್ಥಳ-ಮೂಡುಬಿದಿರೆ ಕಾರ್ಕಳ-ಕೊಲ್ಲೂರು ನಡುವಿನ ರೈಲುಹಳಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವುದು.

ಕೇರಳ ಹಾಗೂ ಗೋವಾ ಮಾದರಿಯಲ್ಲಿ ರಾಜ್ಯದಲ್ಲಿಯೂ ಕರಾವಳಿ ಅಭಿವೃದ್ಧಿ ಅಧ್ಯಯನಕ್ಕಾಗಿ ತಜ್ಞರ ತಂಡವನ್ನು ರಚಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದ ಡಿಪಿಆರ್ ಸಿದ್ಧಪಡಿಸುವುದು.

ಪಣಂಬೂರು ಬೀಚ್ ಅನ್ನು ಎನ್‌ಎಂಪಿಎ ವ್ಯಾಪ್ತಿಗೆ ಪಡೆದು ಶಿಪ್ ಕಟ್ಟಿಂಗ್ ಯಾರ್ಡ್ ನಿರ್ಮಿಸುವ ಚಿಂತನೆಗೆ ಕೂಡಲೇ ತಡೆಯೊಡ್ಡಿ, ಎನ್ಎಎಂಪಿಎ ಸಿಎಸ್‌ಆರ್ ಅನುದಾನವನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಸುವುದು.

ಕರಾವಳಿ ಪ್ರವಾಸೋದ್ಯಮ ಸ್ಥಳಗಳ ಕುರಿತು ವಿಮಾನ ನಿಲ್ದಾಣಗಳು ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸುವುದು. ಮಂಗಳೂರು ರೈಲ್ವೇ ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳುವುದು. ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆ ಆರಂಭಿಸುವುದು.

ಮಂಗಳೂರು-ಉಡುಪಿ ಮಧ್ಯೆ ಮೆಟ್ರೋ ರೈಲು ಯೋಜನೆಗೆ ಸಂಬಂಧಿಸಿದಂತೆ ಗಂಭೀರ ಚಿಂತನೆ ನಡೆಸುವುದು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣಾ ಕಾರ್ಯದ ವೇಗವನ್ನು ತ್ವರಿತಗೊಳಿಸುವುದು. ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಅನುಮತಿ ನೀಡಲು ಪ್ರತ್ಯೇಕ ವಿಭಾಗವನ್ನು ತೆರೆಯುವುದು.

ಖಾಸಗಿಯವರಿಗೆ ಗುತ್ತಿಗೆ ನೀಡಿರುವ ಬೀಚ್‌ಗಳ ಮೇಲೆ ನಿರಂತರ ನಿಗಾವಹಿಸಿ, ಒಪ್ಪಂದ ಉಲ್ಲಂಘನೆ ನಡೆಯದಂತೆ ನೋಡಿಕೊಳ್ಳುವುದು. ಮಂಗಳೂರಿನಲ್ಲಿ ರಿಂಗ್‌ ರೋಡ್ ಯೋಜನೆಗೆ ಆದ್ಯತೆ ನೀಡಿ ಶೀಘ್ರ ಅಭಿವೃದ್ಧಿಪಡಿಸುವುದು.ಹೀಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳುವಂತೆ ಮಂಜುನಾಥ ಭಂಡಾರಿ ಅವರು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.