udupixpress
Home Trending ಕೊರೊನಾ ಭೀತಿ, ಕಾರ್ಮಿಕರ ಅಲಭ್ಯತೆ: ಉಡುಪಿ ಜಿಲ್ಲೆಯಲ್ಲಿ ಆರಂಭಗೊಳ್ಳದ ಯಾಂತ್ರೀಕೃತ ಮೀನುಗಾರಿಕೆ

ಕೊರೊನಾ ಭೀತಿ, ಕಾರ್ಮಿಕರ ಅಲಭ್ಯತೆ: ಉಡುಪಿ ಜಿಲ್ಲೆಯಲ್ಲಿ ಆರಂಭಗೊಳ್ಳದ ಯಾಂತ್ರೀಕೃತ ಮೀನುಗಾರಿಕೆ

ಉಡುಪಿ: ಜಿಲ್ಲೆಯಲ್ಲಿ ಆಗಸ್ಟ್ 1ರಿಂದ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಬೇಕಿತ್ತು. ಆದರೆ ಕೊರೊನಾ ಸೋಂಕು ಇದಕ್ಕೆ ತಡೆಯೊಡ್ಡಿದ್ದು, ಮೀನುಗಾರರು ಸೋಂಕಿಗೆ ಭಯಗೊಂಡು ಕಡಲಿಗೆ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ.
ಮೀನುಗಾರರು ಅಥವಾ ಬಂದರಿನಲ್ಲಿ ದುಡಿಯುವ ಕಾರ್ಮಿಕರಿಗೆ ಒಂದು ವೇಳೆ ಕೊರೊನಾ ಸೋಂಕು ತಗುಲಿದರೆ, ಇಡೀ ಮೀನುಗಾರಿಕಾ ಬಂದರನ್ನು ಸೀಲ್ ಡೌನ್ ಮಾಡಬೇಕಾದ ಪ್ರಮೇಯ ಎದುರಾಗಬಹುದು ಎಂದು ಮೀನುಗಾರರು ಮೀನುಗಾರಿಕೆ ಹೋಗಲು ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮಲ್ಪೆ ಬಂದರಿನಲ್ಲಿ 1500ಕ್ಕೂ ಹೆಚ್ಚಿನ ಯಾಂತ್ರೀಕೃತ ಬೋಟಗಳು ಮೀನುಗಾರಿಕೆ ನಡೆಸುತ್ತಿವೆ. ಕರಾವಳಿ ತೀರದ ಜನರು ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಈ ಬಾರಿ ಮೀನಿನ ಕೊರತೆ ಹಾಗೂ ಕೊರೊನಾದಿಂದಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಆದರೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಿರುವುದರಿಂದ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಮೀನುಗಾರರು ತಯಾರಿಯಲ್ಲ ಎಂದು ಮೀನುಗಾರ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಮಲ್ಪೆ ಬಂದರು ಹಾಗೂ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ಹೊರ ಜಿಲ್ಲೆ, ರಾಜ್ಯದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಇದರಿಂದ ಮೀನುಗಾರಿಕೆಗೆ ಕಾರ್ಮಿಕರ ಸಮಸ್ಯೆಯೂ ಎದುರಾಗಿದ್ದು, ಇನ್ನೊಂದು ಕಡೆ ಜಿಲ್ಲೆಯಲ್ಲಿ ಕೊರೊನಾ ಭೀತಿಯೂ ಹೆಚ್ಚಾಗಿದೆ. ಆದ್ದರಿಂದ ಯಾಂತ್ರೀಕೃತ ಮೀನುಗಾರಿಕೆಯನ್ನು ಯಾವಾಗ ಆರಂಭಿಸಬೇಕು ಎನ್ನುವುದರ ಕುರಿತಂತೆ ಶೀಘ್ರವೇ ಮೀನುಗಾರಿಕಾ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಲಾಗುವುದು. ಮೀನುಗಾರಿಕಾ ಸಂಘಗಳ ಮುಖಂಡರು ಕೂಡ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದ್ದಾರೆ.
error: Content is protected !!