ಉಡುಪಿ, ಜುಲೈ 8: ಸೈಂಟ್ ಮೇರಿಸ್ ಐಲ್ಯಾಂಡ್ಗೆ ಮಲ್ಪೆ ಬೀಚ್ನಿಂದ ಮತ್ತು ಜೆಟ್ಟಿಯಿಂದ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಬೋಟ್ಗಳಿಗೆ ನೀಡಿರುವ ಪರವಾನಗಿ ಅವಧಿಯು ಮುಗಿದಿರುವುದರಿಂದ, ಹೊಸದಾಗಿ ಟೆಂಡರ್ ಕರೆಯುವಂತೆ, ಮಲ್ಪೆ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು, ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಮಲ್ಪೆಯಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗಲು, ಬೀಚ್ನಿಂದ 4 ಬೋಟ್ಗಳು ಮತ್ತು ಜೆಟ್ಟಯಿಂದ 3 ಬೋಟ್ಗಳಿಗೆ ಈಗಾಗಲೇ ಅನುಮತಿ ನೀಡಿದ್ದು, ಇದರ ಅವಧಿಯು ಮುಕ್ತಾಯಗೊಳ್ಳುತ್ತಿದ್ದು, ಹೊಸದಾಗಿ ಟೆಂಡರ್ ಕರೆದು ಅನುಮತಿ ನೀಡುವಂತೆ ಹಾಗೂ ಐಲ್ಯಾಂಡ್ ಪ್ರಯಾಣಕ್ಕೆ ಬೋಟ್ದರ ನಿಗಧಿಪಡಿಸುವ ಕುರಿತಂತೆ ಮತ್ತು ಬೋಟ್ಗಳಲ್ಲಿ ಸಾರ್ವಜನಿಕರು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಪರಿಶೀಲಿಸಿ ಟೆಂಡರ್ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಮಲ್ಪೆ ಅಭಿವೃಧ್ದಿ ಸಮಿತಿ ಸಭೆಯನ್ನು ಪ್ರತಿ 2 ತಿಂಗಳಿಗೊಮ್ಮ ಕರೆಯುವಂತೆ ಮತ್ತು ಪ್ರತಿವರ್ಷ ಕ್ರಿಯಾ ಯೋಜನೆ ರೂಪಿಸಿ ಅದರಂತೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಮಲ್ಪೆ ಬೀಚ್ನಲ್ಲಿ ಸ್ನಾನ ಮತ್ತು ಜಲಕ್ರೀಡೆಯಾಡುವ ಸಂದರ್ಭದಲ್ಲಿ ಯಾವುದೇ ಅವಗಢ ಅನಾಹುತ ಸಂಭವಿಸಿದಲ್ಲಿ, ತುರ್ತು ಚಿಕಿತ್ಸೆ ನೀಡಲು ಮತ್ತು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ಅವಶ್ಯಕತೆ ಇದ್ದು, ಆರೋಗ್ಯ ಇಲಾಖೆ ವತಿಯಿಂದ ಬೀಚ್ನಲ್ಲಿ ತಾತ್ಕಾಲಿಕವಾಗಿ 108 ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡುವಂತೆ ಶಾಸಕ ರಘುಪತಿ ಭಟ್ ತಿಳಿಸಿದರು.
ಸೈಂಟ್ಮೇರಿಸ್ ದ್ವೀಪ ವೀಕ್ಷಣೆಗೆ ತೆರಳುವ ಪ್ರವಾಸಿಗರಿಗೆ ಯಾವುದೇ ಆಹಾರ ಪಾರ್ಥಗಳನ್ನು ದ್ವೀಪಕ್ಕೆ ಕೊಂಡುಹೋಗದಂತೆ ನಿಷೇಧ ಹೇರಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರಘುಪತಿ ಭಟ್ ಅವರು, ಪ್ರವಾಸಿಗರು ತಮ್ಮ ಮನೆಯಿಂದ ತರುವ ಆಹಾರ ಪದಾರ್ಥಗಳನ್ನು ನಿಷೇಧಿಸದಂತೆ ಮತ್ತು ಕೆಲವು ಬೋಟ್ನವರು ಪ್ರವಾಸಿಗರಿಗೆ ಸೈಂಟ್ಮೇರಿಸ್ ದ್ವೀಪವನ್ನು ವೀಕ್ಷಿಸಲು 1 ಗಂಟೆ ಮಿತಿ ಹೇರಿರುವ ಕ್ರಮದ ಕುರಿತು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಬೀಚ್ನಲ್ಲಿ ಪಾರ್ಕಿಂಗ್ ವ್ಯವಸ್ಥೆ:
ಪಡುಕರೆ ಬೀಚ್ ಪ್ರವಾಸಿಗರಿಗೆ ಅತ್ಯಂತ ಸುರಕ್ಷಿತ ಬೀಚ್ ಆಗಿದ್ದು, ಈ ಬೀಚ್ನ್ನು ಅಭಿವೃದ್ದಿಗೊಳಿಸುವ ಕುರಿತಂತೆ ಹೆಚ್ಚಿನ ಆದ್ಯತೆ ನೀಡುವಂತೆ ಹಾಗೂ ಸ್ಥಳೀಯ ಸಾರ್ವಜನಿಕರ ಸಮಿತಿ ರಚಿಸಿ ಬೀಚ್ ಅಭಿವೃದ್ದಿಗೊಳಿಸಬಹುದಾಗಿದ್ದು, ಬೀಚ್ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಮತ್ತು ಪಡುಕೆರೆ ಬೀಚ್ ಅಭಿವೃದ್ದಿ ಕುರಿತಂತೆ ಈಗಾಗಲೇ ಸಲ್ಲಿಸಿರುವ ಪ್ರಸ್ತಾವನೆಗಳ ಅನುಷ್ಠಾನ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಐಲ್ಯಾಂಡ್ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮಲ್ಪೆ ಬೀಚ್ನಲ್ಲಿ ಪಾರ್ಕಿಂಗ್ ವ್ಯವಸ್ಥೆ, ಸಿಸಿ ಟಿವಿ ಅಳವಡಿಕೆ, ಶೌಚಾಲಯಗಳ ನಿರ್ಮಾಣ, ಗೂಡಂಗಡಿಗಳ ನಿರ್ಮಾಣ ವ್ಯವಸ್ಥೆ ಸೇರಿದಂತೆ ಅಗತ್ಯವಿರುವ ಎಲ್ಲಾ ಅಭಿವೃದ್ದಿ ಕಾರ್ಯಗಳ ಕುರಿತಂತೆ ಶಾಸಕರು ಹಾಗೂ ಎಸ್ಪಿ ಅವರೊಂದಿಗೆ ಖುದ್ದು ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಡಿಸಿ ಹೇಳಿದರು.
ಪ್ಲಾಸ್ಟಿಕ್ ಬಳಕೆ ನಿಷೇಧ:
ಮಲ್ಪೆ ಬೀಚ್ನಲ್ಲಿ 12 ವಿಶ್ರಾಂತಿ ಹಟ್ಗಳನ್ನು ನಿರ್ಮಿಸುವಂತೆ, ವಾಚ್ಟವರ್ ನಿರ್ಮಿಸುವಂತೆ, ಕಡಲ್ಕೊರೆತದಿಂದ ಹಾನಿಯಾದ ಸೇತುವೆ ನಿರ್ಮಾಣ ಮತ್ತು ರಸ್ತೆಗೆ ಇಂಟರ್ ಲಾಕ್ ಅಳವಡಿಸುವಂತೆ ಕೆ.ಆರ್.ಐ.ಡಿ.ಎಲ್ ಗೆ ಸೂಚಿಸಿದ ಜಿಲ್ಲಾಧಿಕಾರಿ, ಬೀಚ್ನಲ್ಲಿರುವ ಗೂಡಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಪರಿಶೀಲನೆ ನಡೆಸುವಂತೆ ಮತ್ತು ಟೆಬ್ಮಾ ಶಿಪ್ ಯಾರ್ಡ್ ಜಾಗದಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸುವಂತೆ ಬೀಚ್ ಟೆಂಡರ್ದಾರ ಸುದೇಶ್ ಶೆಟ್ಟಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ಮೀನುಗಾರರ ಫೆಡರೇಶನ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಹಾಗೂ ವಿವಿಧ ಇಲಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿ ಸೋಮವಾರ ಎಸಿ ರಹಿತ ಆಚರಣೆ ಅಂಗವಾಗಿ, ಇಂದಿನ ಸಭೆಯ ಎಸಿ ರಹಿತವಾಗಿ ನಡೆಯಿತು.